ದೊಡ್ಡಬಳ್ಳಾಪುರ: ನಮ್ಮ ದೇಶದ ಸಂವಿಧಾನದಲ್ಲಿ ಪ್ರತಿಭಟಿಸುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ಆದರೆ ಪ್ರತಿಭಟನೆ ಶಾಂತಿಯುತವಾಗಿರಬೇಕು ಎಂದು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದ್ದಾರೆ.
ಸ್ವಾಮೀಜಿಯವರು ದೊಡ್ಡಬಳ್ಳಾಪುರ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿನ ಕ್ರಿಸ್ತ್ ಜಯಂತಿ ಸಿಎಂಐ ಪಬ್ಲಿಕ್ ಸ್ಕೂಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಬಳಿಕ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಹಲವೆಡೆ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವರು ಶಾಂತಿಯುತ ಪ್ರತಿಭಟನೆ ಮಾಡಬೇಕು ಎಂದರು.
ಭಾರತದಂತಹ ದೇಶ ಜಗತಿನಲ್ಲಿಯೇ ಇಲ್ಲ, ಇಷ್ಟೊಂದು ಜನಸಂಖ್ಯೆ, ಇಷ್ಟೊಂದು ಜಾತಿ ಇರುವ ಮತ್ತು ಬೇರೆ ಬೇರೆ ಭಾಷೆಗಳನ್ನ ಮಾತನಾಡುವ ಜನರಿರುವ ದೇಶವನ್ನು ನೋಡಲು ಸಾಧ್ಯವೇ ಇಲ್ಲ. ಪ್ರತಿಭಟನಾಕಾರರು ಶಾಂತಿಯುತ ಪ್ರತಿಭಟನೆ ನಡೆಸಿದರೆ ಒಳ್ಳೆಯದು. ಸಾರ್ವಜನಿಕ ಅಸ್ತಿ ಪಾಸ್ತಿಗೆ ಹಾನಿಯಾಗದಂತೆ ಹೋರಾಟ ಮಾಡುವುದು ಉತ್ತಮ ಎಂದು ಹೇಳಿದರು.