ದೊಡ್ಡಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕುತ್ತಲೇ, ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ವೇದಿಕೆಯತ್ತ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಹಾಗೂ ಬಿಜೆಪಿ ರಾಜ್ಯ ಸರ್ಕಾರದ ಜನಸ್ಪಂದನ ಕಾರ್ಯಕ್ರಮದ ವಿರುದ್ಧ ಕರಾಳೋತ್ಸವ ಆಚರಣೆ ಮಾಡಲು ಮುಂದಾದ 45ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮೋದಿಗೆ ಜೈಕಾರ ಹಾಕುವುದರ ಜೊತೆಗೆ ಜಿಲ್ಲಾ ಕೇಂದ್ರದ ಘೋಷಣೆ ಹಾಕುತ್ತ ವೇದಿಕೆ ಕಾರ್ಯಕ್ರಮದತ್ತ ತೆರಳಲು ಮುಂದಾದರು. ತಕ್ಷಣವೇ ಪೊಲೀಸರು ದೊಡ್ಡಬಳ್ಳಾಪುರ ನಗರಸಭೆ ಮುಂಭಾಗ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನೆಲಮಂಗಲಕ್ಕೆ ಕಳುಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನಾಗಿ ದೊಡ್ಡಬಳ್ಳಾಪುರ ನಗರವನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಕಾರ್ಯಕರ್ತರು ಸಹ ಹೋರಾಟಕ್ಕೆ ಧುಮುಕಿದ್ದಾರೆ. ಬಿಜೆಪಿ ರಾಜ್ಯ ಸರ್ಕಾರ 3 ವರ್ಷಗಳ ಸಾಧನಾ ಸಮಾವೇಶವಾಗಿ ದೊಡ್ಡಬಳ್ಳಾಪುರದಲ್ಲಿ ಇಂದು ಜನಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡಿದೆ. ಇಂದು ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದ ವಿರುದ್ಧ ಸಮಿತಿ ಕರಾಳೋತ್ಸವ ಆಚರಣೆಗೆ ಕರೆ ನೀಡಿದೆ. ಕರಾಳೋತ್ಸವದ ಅಂಗವಾಗಿ ಜಾಥಾ ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಕರಾಳೋತ್ಸವ ಅಂಗವಾಗಿ ಇಂದು ನಗರದ ಕನ್ನಡ ಜಾಗೃತ ಭವನದಿಂದ ಜಗದೀಶ್ ವೃತ್ತದವರೆಗೂ ಜಾಥಾ ನಡೆಸಲು ಪ್ರತಿಭಟನಾಕಾರರು ಮುಂದಾಗಿದ್ದರು. ಈ ವೇಳೆ ಕರಾಳೋತ್ಸವಕ್ಕೆ ಮುಂದಾಗಿದ್ದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಇದನ್ನೂ ಓದಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಎಂಟಿಬಿ, ವಿಶ್ವನಾಥ್