ದೊಡ್ಡಬಳ್ಳಾಪುರ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಬೆಂಗಳೂರಿಗೆ ತೆರಳುತ್ತಿದ್ದ 60ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಡ್ನಲ್ಲಿ ಪ್ರತಿಭಟನೆ ಮಾಡಲು ತಾಲೂಕಿನ ಆಶಾ ಕಾರ್ಯಕರ್ತೆಯರು ತೆರೆಳುತ್ತಿದ್ದರು. ಈ ವೇಳೆ, ಬಸ್ ನಿಲ್ದಾಣದಲ್ಲಿ ಅವರನ್ನು ಬಂಧಿಸಿ ಠಾಣೆಗೆ ಕರೆದೊಯಲಾಗಿತ್ತು.
ಬಂಧನ ಖಂಡಿಸಿ ಮಾತನಾಡಿದ ಆಶಾ ಕಾರ್ಯಕರ್ತೆಯರು, ನಾವು ಕಳೆದ 4 ತಿಂಗಳುಗಳಿಂದ ಕೊರೊನಾ ವಾರಿಯರ್ಸ್ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಮನೆ ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯನ್ನು ಕಾಪಾಡುತ್ತಿದ್ದೇವೆ. ಆದರೆ, ನಮಗೆ ಕಳೆದ 9 ತಿಂಗಳಿಂದ ಪ್ರೋತ್ಸಾಹಧನ ನೀಡಿಲ್ಲ. ರಾಜ್ಯ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ. ಸೇವಾ ಅವಧಿಯಲ್ಲಿ ಕೊರೊನಾ ಸೋಂಕಿಗೆ ತುತ್ತಾದರೆ ನಮಗಾಗಲಿ, ನಮ್ಮ ಕುಟುಂಬದ ರಕ್ಷಣೆಗಾಗಲಿ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಪ್ರತಿಭಟನೆಗೆ ತೆರಳುತ್ತಿದ್ದ ನಮ್ಮನ್ನು ಏಕಾಏಕಿ ವಶಕ್ಕೆ ಪಡೆದು ಇಲ್ಲಿ ತಂದು ಕೂರಿಸಿದ್ದಾರೆ. ಇದರಿಂದ ನಮಗೆ ತುಂಬಾ ನೋವಾಗಿದೆ. ಸರ್ಕಾರ ಆಶಾ ಕಾರ್ಯಕರ್ತೆಯರನ್ನು ಇಂತಹ ಹೀನಾಯ ಪರಿಸ್ಥಿತಿಗೆ ತಳ್ಳಿದೆ ಎಂದು ಅಳಲು ತೋಡಿಕೊಂಡರು.
ನಮಗೆ ಕನಿಷ್ಠ ವೇತನ (12000 ರೂ.) ನಿಗದಿ ಮಾಡಬೇಕು. ಪ್ರತಿ ತಿಂಗಳು ವೇತನ ಸಿಗುವಂತಾಗಬೇಕು, ನಮ್ಮ ಆರೋಗ್ಯದ ದೃಷ್ಟಿಯಿಂದ ರಕ್ಷಣಾ ಕಿಟ್ಗಳನ್ನು ವಿತರಿಸಬೇಕು, ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಆಶಾ ಕಾರ್ಯಕರ್ತೆಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ನಂತರ ತಾಲೂಕು ದಂಡಾಧಿಕಾರಿ ಟಿಎಸ್ ಶಿವರಾಜ್ ಅವರಿಗೆ ತಮ್ಮ ಮನವಿ ಪತ್ರ ಸಲ್ಲಿಸಿದರು.