ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದ ಕೆರೆಗಳು 30 ವರ್ಷಗಳ ನಂತರ ತುಂಬಿ ಹರಿಯುತ್ತಿವೆ. ಆದರೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಯುಕ್ತ ನೀರು ಮತ್ತು ದೊಡ್ಡಬಳ್ಳಾಪುರ ನಗರಸಭೆಯ ತ್ಯಾಜ್ಯ ನೀರಿನಿಂದ ಕೆರೆಗಳ ನೀರು ವಿಷಯುಕ್ತವಾಗಿದೆ. ವಿಷಯುಕ್ತ ತ್ಯಾಜ್ಯದಿಂದ ಕೆರೆಗಳ ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ ಅರ್ಕಾವತಿ ನದಿ ಕೆರೆಗಳ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಕೆರೆಗಳ ನೀರು ಸಂಪೂರ್ಣ ಕಲುಷಿತ: ಅರ್ಕಾವತಿ ನದಿ ಕೆರೆಗಳ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಡಾ. ಆಂಜಿನಪ್ಪ ಮಾತನಾಡಿ, 'ಸರ್ಕಾರ ಜನರ ಜೀವಗಳ ಜೊತೆ ಆಟವಾಡುತ್ತಿದೆ. ಈ ಭಾಗದಲ್ಲಿನ ಕೆರೆಗಳ ನೀರು ಹಿಂದಿನ ಕಾಲದಲ್ಲಿ ಕುಡಿಯುವ ನೀರಿನ ಮೂಲವಾಗಿತ್ತು. ಆದರೆ, ಕೆರೆಯ ಒಡಲಿಗೆ ಕೈಗಾರಿಕೆಗಳ ವಿಷವನ್ನು ನೇರವಾಗಿ ಬಿಡಲಾಗುತ್ತಿದೆ. ಇದರಿಂದ ಕೆರೆಗಳ ನೀರು ಸಂಪೂರ್ಣ ಕಲುಷಿತಗೊಂಡಿದೆ. ಅಪಾಯ ಸಂಭವಿಸುವ ಮುನ್ನ ಸರ್ಕಾರ ಎಚ್ಚರಗೊಳ್ಳಬೇಕಿದೆ' ಎಂದರು.
ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ವಿಜಯ ಇ. ರವಿಕುಮಾರ್ ಮಾತನಾಡಿ, 'ಈಗಾಗಲೇ ಅತ್ಯಾಧುನಿಕ ಎಸ್.ಟಿ.ಪಿ ಪ್ಲಾಂಟ್ ನಿರ್ಮಾಣಕ್ಕೆ 28 ಗುಂಟೆ ಜಮೀನು ಗುರುತು ಮಾಡಲಾಗಿದೆ. ಶೀಘ್ರವೇ ನೀರನ್ನು ಶುದ್ಧೀಕರಣ ಮಾಡುವ ಕೆಲಸ ಮಾಡಲಾಗುತ್ತದೆ' ಎಂದರು.
ಇದನ್ನೂ ಓದಿ: ಕೆರೆ ರಕ್ಷಣೆಗಾಗಿ ಹೋರಾಟದ ಹಾದಿ ತುಳಿದ ಗ್ರಾಮಸ್ಥರು: ಮನೆ ಮನೆಗೆ ತೆರಳಿ ಭಿಕ್ಷಾಟನೆ