ಆನೇಕಲ್: ಬೆಂಗಳೂರು ಸುತ್ತ ಕೆರೆ ಒತ್ತುವರಿಗಳದ್ದೇ ದರ್ಬಾರು. ಇದೀಗ ಗ್ರಾಮವಷ್ಟೇ ಅಲ್ಲ ನಗರಗಳ ಕೋಳಿ ತ್ಯಾಜ್ಯ ಸೇರಿದಂತೆ ಎಸ್ಟೀಪಿ ಘಟಕಗಳಿಲ್ಲದೇ ಊರ ಕಸಕಡ್ಡಿ ಕೆರೆಗಳಿಗೆ ಹರಿಸಿ ಕೆರೆ ಅಂದರೆ ತಿಪ್ಪೆ ಗುಂಡಿ ಎನ್ನುವಂತ ಪರಿಸ್ಥಿತಿ ಎದುರಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕೆರೆ ಏರಿಮೇಲೆ ವಕೀಲರೊಂದಿಗೆ ಸೇರಿ ವಿಶಿಷ್ಟ ಪ್ರತಿಭಟನೆ ನಡೆಸಿದರು.
ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಎರಡನೇ ದೊಡ್ಡ ಕೆರೆ ಎಂದೇ ಪ್ರಖ್ಯಾತಿ ಪಡೆದಿರುವ ಕೆರೆಯ ಪರಿಸ್ಥಿತಿ ಇದಾದರೆ ಉಳಿದ ಸಣ್ಣ ಪುಟ್ಟ ಕೆರೆಗಳು ತಿಪ್ಪೆಗುಂಡಿಗಳಾಗಿ ವಿಷಯುಕ್ತಗೊಂಡಿವೆ. ಇದರಿಂದ ಪರಿಸರವಾದಿಗಳು ಪರಿಸರ ಮಾಲಿನ್ಯ ಇಲಾಖಾಧಿಕಾರಿಗಳಿಗೆ ಎಷ್ಟೇ ಅರ್ಜಿ ಹಾಕಿ, ಎಡತಾಕಿದ್ದಾರೆ. ಆದರೆ, ಅಧಿಕಾರಿಗಳು ಜಾಣಕಿವುಡು ಪ್ರದರ್ಶಿರುವುದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅಧಿಕಾರಿಗಳು ಪರಿಸರವಾದಿಗಳ ವಿರುದ್ದ ತಿರುಗಿ ಬಿದ್ದಿದ್ದಾರೆ. ಮುತ್ತಾನಲ್ಲೂರು ಕೆರೆಗೆ ಅಲ್ಲಿನ ಸುತ್ತಮುತ್ತಲಿನ ಕಾರ್ಖಾನೆಗಳ ಹಾಗೂ ಅಪಾರ್ಟ್ಮೆಂಟ್ ಗಳ ವಿಷಪೂರಿತ ನೀರನ್ನು ಬಿಡುತ್ತಿದ್ದು, ಕೆರೆಯಲ್ಲಿನ ನೀರು ಸಂಪೂರ್ಣ ಕಲುಷಿತ ಗೊಂಡು ಜನ ಜಾನುವಾರುಗಳು ಮುಟ್ಟದ ಪರಿಸ್ಥಿತಿ ಬಂದಿದೆ. ಇದು ಒಂದೆಡೆಯಾದರೆ ನೀರು ನೊರೆ ಮತ್ತು ದುರ್ವಾಸನೆ ಸಹ ಗ್ರಾಮಸ್ಥರನ್ನು ದಿಕ್ಕು ತೋಚದಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಇಂದು ವಕೀಲರ ಸಂಘದ ವತಿಯಿಂದ ಮುತ್ತಾನಲ್ಲೂರು ಕೊಡಿ ಹೋಗುವ ಜಾಗದಲ್ಲಿ ಪ್ರತಿಭಟನೆ ನಡೆಸುವ ಮೂಲಕ ನ್ಯಾಯಾಲಯಕ್ಕೂ ದಾವೆ ಹೂಡಿ ಪ್ರಕರಣ ದಾಖಲು ಮಾಡುವುದಾಗಿ ವಕೀಲರು ತಿಳಿಸಿದ್ದಾರೆ.