ಬೆಂಗಳೂರು: ಕಾನೂನಿನಲ್ಲಿ ನಿಷೇಧವಾಗಿದ್ದರೂ, ಪದೇ ಪದೇ ಪುನರಾವರ್ತನೆಯಾಗುತ್ತಿರುವ ಮ್ಯಾನ್ ಹೋಲ್ ದುರಂತಗಳನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಯಿತು.
ಶನಿವಾರ ಮ್ಯಾನ್ ಹೋಲ್ಗೆ ಇಳಿದು ಕೆಲಸ ಮಾಡುವಾಗ ಕಾರ್ಮಿಕನೊಬ್ಬ ಜೀವ ಕಳೆದುಕೊಂಡ ಘಟನೆ ಖಂಡಿಸಿ ವಿವಿಧ ಸಂಘಟನೆಗಳು ಟೌನ್ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದರು. ಇದು ಆಕಸ್ಮಿಕ ಸಾವಲ್ಲ, ದಲಿತ ಕಾರ್ಮಿಕನ ಕೊಲೆ ಎಂದು ಆಕ್ರೋಶ ಹೊರಹಾಕಿದರು. ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಜೈನ ಸಂಘದ ಆವರಣದಲ್ಲಿ ಮ್ಯಾನ್ಹೋಲ್ ಗೆ ಇಳಿದು ಕೆಲಸ ಮಾಡುತ್ತಿದ್ದ ಕಾರ್ಮಿಕ ಸಿದ್ದಪ್ಪ ಉಸಿರುಗಟ್ಟಿ ಸಾವನ್ನಪ್ಪಿದ್ದರು.
ಇಲ್ಲಿಯವರೆಗೂ ಇಂತಹ 85 ಬಡ ಕಾರ್ಮಿಕರು ಮ್ಯಾನ್ ಹೋಲ್ಗೆ ಇಳಿದು ಜೀವ ಕಳೆದುಕೊಂಡಿದ್ದಾರೆ. ಆದರೂ ಸರ್ಕಾರ ಇದರ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ಈ ಪ್ರಕರಣದಲ್ಲಾದರೂ ನ್ಯಾಯ ಸಿಗಬೇಕು, ಮುಂದೆ ಸಫಾಯಿ ಕರ್ಮಚಾರಿಗಳಿಗೆ ಇಂತಹ ದುರ್ಗತಿ ಬರದಂತೆ ಸರ್ಕಾರ ತಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಎಐಟಿಯುಸಿ, ಸಫಾಯಿ ಕರ್ಮಾಚಾರಿ ಕಾವಲು ಸಮಿತಿ, ಸ್ಲಂ ಜನಾಂದೋಲನ, ಅಖಿಲ ಭಾರತ ಪೀಪಲ್ಸ್ ಫೋರಂ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ರು.
ಬೇಡಿಕೆಗಳು:
2 ತಿಂಗಳೊಳಗೆ ಸರ್ಕಾರ ಸಮಿತಿ ರಚಿಸಿ, ಇಂತಹ ಸಾವುಗಳ ಕುರಿತು ತನಿಖೆಯ ಪ್ರಗತಿ ಬಗ್ಗೆ ವರದಿ ನೀಡಬೇಕು. ಮ್ಯಾನ್ ಹೋಲ್ ಗೆ ಸಫಾಯಿ ಕರ್ಮಚಾರಿಗಳು ಇಳಿದು ಕೆಲಸಮಾಡುವುದು ನಿಷಿದ್ಧವಾಗಿದ್ದು, ಈ ಕಾಯ್ದೆಯ ಅನುಷ್ಠಾನದ ಬಗ್ಗೆ ಪರಿಶೀಲಿಸಬೇಕು. ಘಟನೆ ನಡೆದ S.S.B.S ಜೈನ ಸಂಘದ ಟ್ರಸ್ಟಿ ಹಾಗೂ ಮುಖ್ಯಸ್ಥರನ್ನು ಬಂಧಿಸಬೇಕು ಎಂದು ಪ್ರಮುಖ ಬೇಡಿಕೆಗಳ ಮನವಿ ಸಲ್ಲಿಸಿದರು.