ಬೆಂಗಳೂರು: ಹೊಸಕೋಟೆ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ವ್ಯಕ್ತಿಗಳ ವಿವರವನ್ನೊಳಗೊಂಡ ಭಿತ್ತಿ ಪತ್ರಗಳು, ಕರಪತ್ರಗಳು, ಬ್ಯಾನರ್ಸ್ ಮುಂತಾದ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಲು ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆ ಜಿಲ್ಲಾ ವ್ಯಾಪ್ತಿಗೆ ಬರುವ ಎಲ್ಲ ಮುದ್ರಣಾಲಯಗಳ ಮಾಲೀಕರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚುನಾವಣೆಯ ಪ್ರಚಾರ ಸಾಮಗ್ರಿಗಳ ದರ ನಿಗದಿಪಡಿಸುವ ಸಭೆ ನಡೆಯಿತು. ಪೋಸ್ಟರ್ಸ್, ಬ್ಯಾನರ್ಸ್, ಕರಪತ್ರ ಸೇರಿದಂತೆ ಇತರ ಪ್ರಚಾರ ಪರಿಕರಗಳ ಮುದ್ರಣ ಶುಲ್ಕವನ್ನು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ನಿಗದಿಪಡಿಸಿದ ಚುನಾವಣಾ ವೆಚ್ಚದ ಮೊತ್ತಕ್ಕೆ ಸೇರಿಸಬೇಕು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗೆ ತಿಳಿಯದೇ ಚುನಾವಣಾ ಪ್ರಚಾರ ಪರಿಕರಗಳು ಮುದ್ರಿಸಲ್ಪಟ್ಟಲ್ಲಿ ಅಂತಹ ಮುದ್ರಣಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಐಪಿಸಿ ಸೆಕ್ಷನ್ 171 ಹೆಚ್ ಕಾಯ್ದೆಯ ಪ್ರಕಾರ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಬಗ್ಗೆ ಪ್ರಕಟಣೆ ಹೊರಡಿಸುವ ವ್ಯಕ್ತಿಯ ಫೋಟೊ ಮತ್ತು ಹೆಸರನ್ನು ಮುದ್ರಿಸಬೇಕು. ಮುದ್ರಣ ಮಾಡಿಸುವ ವ್ಯಕ್ತಿಯು ನಾನೇ ಸದರಿ ಭಿತ್ತಿಪತ್ರಗಳನ್ನು ಹಾಗೂ ಇತರ ಪರಿಕರಗಳನ್ನು ಮುದ್ರಣ ಮಾಡಿಸುತ್ತೇನೆ ಎಂದು ಘೋಷಿಸಿ, ದೃಢೀಕರಿಸಿ ಹಾಗೂ ಇಬ್ಬರು ವ್ಯಕ್ತಿಗಳಿಂದಲೂ ಸಹ ದೃಢೀಕರಿಸಿರಬೇಕು. ಮುದ್ರಿಸಲ್ಪಟ್ಟ ಭಿತ್ತಿಪತ್ರ ಹಾಗೂ ಇತರ ಪರಿಕರಗಳ ಪ್ರತಿಯನ್ನು ಸಂಬಂಧಪಟ್ಟ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಅಥವಾ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಭಿತ್ತಿಪತ್ರಗಳಲ್ಲಿ ಕಾನೂನು ಬಾಹಿರ ವಿಷಯಗಳು ಅಥವಾ ಜಾತಿ, ಧರ್ಮ, ಪಂಗಡ, ಸಮುದಾಯ, ಭಾಷೆ, ವ್ಯಕ್ತಿತ್ವ ಮುಂತಾದವುಗಳನ್ನು ಪ್ರಚೋದಿಸುವ ವಿಚಾರಗಳನ್ನು ಪ್ರಕಟಣೆಗೊಳಿಸಿದರೆ ಅಂತಹವರ ವಿರುದ್ಧ ಕಾಯ್ದೆಯ ಅನ್ವಯ ಕ್ರಮ ಜರುಗಿಸಲಾಗುವುದು. ಮುದ್ರಣಾಲಯಗಳ ಮಾಲೀಕರುಗಳಿಗೆ ಅವರ ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಪರ ಹ್ಯಾಂಡ್ ಬಿಲ್ಸ್, ಭಿತ್ತಿಪತ್ರಗಳು ಮುಂತಾದವುಗಳನ್ನು ಎಷ್ಟು ಪ್ರಮಾಣದಲ್ಲಿ ಮುದ್ರಣ ಮಾಡಲಾಗಿದೆ ಎಂಬ ಖಚಿತ ಮಾಹಿತಿಯನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳ ಕಚೇರಿಗೆ ಮುದ್ರಿತ ನಾಲ್ಕು ಪ್ರತಿಗಳನ್ನು ಹಾಗೂ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ತಪ್ಪದೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.