ನೆಲಮಂಗಲ: ಅಕ್ರಮವಾಗಿ ಬಡ್ಡಿ ದಂಧೆ ಮತ್ತು ಬೆದರಿಕೆ ಹಾಕಿ ತನ್ನ ಹೆಸರಿಗೆ ಜಮೀನು ನೋಂದಣಿ ಮಾಡಿಸಿಕೊಳ್ಳುತ್ತಿದ್ದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಜಮೀನಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಗಂಗೇಗೌಡ ಬಂಧಿತ ಆರೋಪಿ. ಈತನ ವಿರುದ್ಧ ಮಹದೇವ ಪ್ರಸಾದ್ ಎಂಬಾತ ಜೀವಬೆದರಿಕೆ ಆರೋಪದಡಿ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ತನಿಖೆ ಕೈಗೊಂಡ ನೆಲಮಂಗಲ ಉಪ ವಿಭಾಗದ ಡಿವೈಎಸ್ಪಿ ಜಗದೀಶ್ ನೇತೃತ್ವದ ತಂಡ, ಗಂಗೇಗೌಡನ ಮನೆ ಸೇರಿದಂತೆ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಿದೆ. ಆರೋಪಿಯ ಮನೆಯಲ್ಲಿ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಂಗೇಗೌಡ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಅಕ್ರಮವಾಗಿ ಬಡ್ಡಿ ದಂಧೆ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ರೈತರ ಜಮೀನು ಪತ್ರಗಳನ್ನು ಇಟ್ಟುಕೊಂಡು ಹೆಚ್ಚಿನ ಬಡ್ಡಿಗೆ ಸಾಲ ನೀಡುತ್ತಿದ್ದ. ಬಳಿಕ ಬೆದರಿಕೆ ಹಾಕಿ ತನ್ನ ಹೆಸರಿಗೆ ಜಮೀನನ್ನು ಬರೆಸಿಕೊಳ್ಳುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ.
ಅಕ್ರಮ ಬಡ್ಡಿಕೋರರಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಎಚ್ಚರಿಕೆ ನೀಡಿದ್ದು, ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿರುವ ಮತ್ತು ಧಮ್ಕಿ ಹಾಕಿ ಜಮೀನುಗಳನ್ನು ಪಡೆಯುತ್ತಿರುವವರ ವಿರುದ್ಧ ದೂರು ನೀಡಿದ್ದಲ್ಲಿ ಕಾನೂನು ಕ್ರಮ ತೆಗೆದುಕೂಳ್ಳುವ ಭರವಸೆ ನೀಡಿದ್ದಾರೆ.