ಹೊಸಕೋಟೆ (ಬೆ. ಗ್ರಾಮಾಂತರ): ಬಸ್ ನಿಲ್ದಾಣದಲ್ಲಿ ಪ್ರಯಾಣಿಕನಂತೆ ನಿಲ್ಲುತ್ತಿದ್ದ ಆತ ಬುದ್ಧಿಮಾಂದ್ಯನಂತೆ ನಟಿಸಿ ಜನರಿಂದ ಪರ್ಸ್, ಮೊಬೈಲ್ಗಳನ್ನು ಕದಿಯುತ್ತಿದ್ದ. ಈ ಐನಾತಿ ಕಳ್ಳನನ್ನು ಪೊಲೀಸರು ಬಂಧಿಸಿದ್ದು 50 ಲಕ್ಷ ರೂ ಮೌಲ್ಯದ 150 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಕದ್ದ ಮೊಬೈಲ್ಗಳನ್ನು ಮಾರಾಟ ಮಾಡಿ ಮೋಜಿನ ಜೀವನ ಮಾಡುತ್ತಿದ್ದ ಕಳ್ಳ ಕೊನೆಗೂ ಪೊಲೀಸರ ಬಲೆಯಲ್ಲಿ ಸೆರೆಯಾಗಿದ್ದಾನೆ. ಆರೋಪಿಯನ್ನು ವಿನಯ್ ಎಂದು ಗುರುತಿಸಲಾಗಿದೆ. ಸಂಜೆ ಮತ್ತು ಬೆಳಗಿನ ಹೊತ್ತಲ್ಲಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕನಂತೆ ಬರುತ್ತಿದ್ದ ಈತ, ಬುದ್ಧಿಮಾಂದ್ಯನಂತೆ ನಟಿಸುತ್ತಿದ್ದ. ಈ ಮೂಲಕ ಪ್ರಯಾಣಿಕರ ಮೊಬೈಲ್ ಮತ್ತು ಪರ್ಸ್ಗಳನ್ನು ಎಗರಿಸುತ್ತಿದ್ದ.
ಕದ್ದ ಮೊಬೈಲ್ಗಳ ಪಾಸ್ವರ್ಡ್ ತೆರೆದು ಗೂಗಲ್ ಪೇ, ಫೋನ್ ಪೇ ಮೂಲಕ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿನ ಸ್ನೇಹಿತರಿಗೆ ಹಣ ಕಳಿಸುತ್ತಿದ್ದ. ಆ ನಂತರ ಕಮಿಷನ್ ರೂಪದಲ್ಲಿ ಸ್ನೇಹಿತರಿಂದ ಹಣ ಹಾಕಿಸಿಕೊಳ್ಳುತ್ತಿದ್ದ. ಬಂದ ಹಣದಲ್ಲಿ ಮೋಜಿನ ಜೀವನ ಸಾಗಿಸುತ್ತಿದ್ದ. ಈತನನ್ನು ಹೆಡೆಮುರಿ ಕಟ್ಟಿರುವ ಹೊಸಕೋಟೆ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಾರಸ್ದಾರರಿಗೆ ಮೊಬೈಲ್ಗಳನ್ನು ಪೊಲೀಸರು ವಾಪಸ್ ಮಾಡಿದರು.
ಪ್ರಕರಣದ ಕುರಿತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದು, ಕೆಲವೊಂದು ಫೋನ್‌ಗಳನ್ನು ಆರೋಪಿ ತನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದ. 110 ಮೊಬೈಲ್ಗಳನ್ನು ನಾವು ಅವನ ಮನೆಯಿಂದನೇ ವಶಕ್ಕೆ ಪಡೆದುಕೊಂಡವು. ಉಳಿದ 40 ಫೋನ್‌ಗಳನ್ನು ಪರಿಚಯಸ್ಥರಿಗೆ, ಕೆಲವನ್ನು ಮೊಬೈಲ್ ಶಾಪ್ಗಳಿಗೆ ಕೊಡುತ್ತಿದ್ದ. 2-3 ಪ್ರಕರಣದಲ್ಲಿ ಸುಲಭವಾಗಿ ಮೊಬೈಲ್ ಲಾಕ್ ತೆಗೆಯಲು ಸಾಧ್ಯವಾಗುವ ಮೊಬೈಲ್ಗಳಿಂದ ಫೋನ್ ಪೇ, ಗೂಗಲ್ ಪೇ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಕಬಳಿಸುತ್ತಿದ್ದ. ಈ ವಿಚಾರ ನಮ್ಮ ತನಿಖೆಯಲ್ಲಿ ಕಂಡುಬಂದಿದೆ.
ಆರೋಪಿ ಮೂಲತಃ ಆಂಧ್ರಪ್ರದೇಶದ ಚಿತ್ತೂರಿನವನು. ಆದರೆ ಈಗ ಇಲ್ಲಿಯ ಗ್ರಾಮವೊಂದರಲ್ಲಿ ತನ್ನ ಹೆಂಡತಿ ಜೊತೆ ವಾಸವಿದ್ದಾನೆ. ಕಳ್ಳತನ ಮಾಡಿರುವ ಮೊಬೈಲನ್ನು ಮಾರಾಟ ಮಾಡಿ, ಇಲ್ಲಿಂದ ಬಹಳಷ್ಟು ಕಡೆ ಹೋಗಿ ಈ ಹಣದಲ್ಲಿ ಮೋಜು ಮಾಡಿ ಬರುತ್ತಾನೆ. ಹೈದರಾಬಾದ್, ಬೆಂಗಳೂರಿನಂತಹ ಪಟ್ಟಣದಲ್ಲಿ ಎಂಜಾಯ್ ಮಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಬೇರೆ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಅದನ್ನೂ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಕೆಲವು ಕಡೆ ಮೊಬೈಲ್ ಕಳವು ಪ್ರಕರಣ ದಾಖಲಾಗಿದ್ದರೆ ಇನ್ನು ಕೆಲವೆಡೆ ಬರೀ ಕಳ್ಳತನ ಪ್ರಕರಣ ಮಾತ್ರ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬೀದರ್ ಪೊಲೀಸರ ಕಾರ್ಯಾಚರಣೆ: 11 ಆರೋಪಿಗಳು ಸೆರೆ, ₹52 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ಜಪ್ತಿ