ನೆಲಮಂಗಲ: ಬೆನ್ನತ್ತಿ ಹಿಡಿಯಲು ಹೋದ ವೇಳೆ ಹಲ್ಲೆಗೆ ಮುಂದಾದ ಕೊಲೆ ಆರೋಪಿಗಳ ಮೇಲೆ ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಬಳಿಕ ಗಾಯಗೊಂಡ ಆರೋಪಿಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನೆಲಮಂಗಲ ಪಟ್ಟಣದ ಗಣೇಶನ ಗುಡಿಯಲ್ಲಿ ಘಟನೆ ನಡೆದಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಕಂಡುಬಂದಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಕೊಲೆ ಎಂದು ತಿಳಿದು ಬಂದಿದೆ. ನಂತರ ಜಕ್ಕಸಂದ್ರದ ನಿವಾಸದಲ್ಲಿ ಆರೋಪಿಗಳು ಇರುವ ಮಾಹಿತಿ ಸಿಕ್ಕಿತ್ತು.
ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲು ನೆಲಮಂಗಲ ಗ್ರಾಮಾಂತರ ಪಿಎಸ್‌ಐ ನವೀನ್ ಕುಮಾರ್ ಮುಂದಾಗಿದ್ದರು. ಆದರೆ ಕೊಲೆ ಆರೋಪಿಗಳು ಬಂಧಿಸಲು ಬಂದ ಪಿಎಸ್‌ಐ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಆಗ ಆತ್ಮರಕ್ಷಣೆಗಾಗಿ ಸಿಪಿಐ ಅನಿಲ್ ಕುಮಾರ್ ಆರೋಪಿಗಳ ಕಾಲುಗಳಿಗೆ ಗುಂಡು ಹೊಡೆದಿದ್ದಾರೆ. ಬಳಿಕ ಗಾಯಗೊಂಡ ಆರೋಪಿಗಳನ್ನ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯಲ್ಲಿ ಪಿಎಸ್‌ಐ ನವೀನ್ ಕುಮಾರ್ ಬೆನ್ನಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಧಿತರು ಬೆಂಗಳೂರಿನ ಹೆಬ್ಬಗೋಡಿ ನಿವಾಸಿ ಹೇಮಂತ್ ಸಾಗರ್ (23), ನೆಲಮಂಗಲ ಪಟ್ಟಣದ ಜಕ್ಕಸಂದ್ರ ನಿವಾಸಿ ವಿನೋದ್ (24) ಎಂದು ತಿಳಿದುಬಂದಿದೆ. ಇವರು ಚನ್ನಪಟ್ಟಣ, ರಾಮನಗರ, ಆನೇಕಲ್ ಸೇರಿದಂತೆ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಡಕಾಯತಿ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಏನದು ಶವ ಸಿಕ್ಕ ಪ್ರಕರಣ:
ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗ್ರಾಮದ ಹೊರವಲಯದಲ್ಲಿ ಮೂರು ದಿನಗಳ ಹಿಂದೆ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಅದು ತುಮಕೂರು ಮೂಲದ ಕೆಂಪೇಗೌಡ (39) ಎಂಬುವರ ಮೃತದೇಹ ಎಂದು ತಿಳಿಬಂದಿತ್ತು. ಆರೋಪಿಗಳು ಇನ್ನೋವಾ ಕ್ರೆಟಾ ಕಾರಿಗಾಗಿ ಕೊಲೆಗೈದು ಶವದ ಗುರುತು ಸಿಗಬಾರದೆನ್ನುವ ಕಾರಣಕ್ಕೆ ಮಲ್ಲರಬಾಣವಾಡಿ ಗ್ರಾಮದಲ್ಲಿ ಶವ ಸುಟ್ಟು ಪರಾರಿಯಾಗಿದ್ದರು. ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.