ದೊಡ್ಡಬಳ್ಳಾಪುರ: ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಬೆಣಸಿಹಟ್ಟಿ ಗ್ರಾಮದ ಕೃಷ್ಣಪ್ಪ (52) ಬಂಧಿತ ಆರೋಪಿ. ಈತ ತನ್ನ ಮನೆಯ ಹಿಂದಿನ ತೋಟದಲ್ಲಿ ಯಾರಿಗೂ ಕಾಣದಂತೆ ಸುಮಾರು 4 ಕೆಜಿಗೂ ಅಧಿಕ ಗಾಂಜಾ ಗಿಡಗಳನ್ನು ಬೆಳೆದಿದ್ದನು.
ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಡಿವೈಎಸ್ಪಿ ಟಿ. ರಂಗಪ್ಪ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಅವರ ಸೂಚನೆಯ ಮೇರೆಗೆ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು 1 ಲಕ್ಷ 30 ಸಾವಿರ ರೂ. ಬೆಲೆಬಾಳುವ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಬ್ಇನ್ಸ್ ಪೆಕ್ಟರ್ ಬೇಬಿವಾಲೇಕರ್ ಹಾಗೂ ಸಿಬ್ಬಂದಿ ರಂಗಸ್ವಾಮಯ್ಯ, ರಮೇಶ್, ಹುಸೇನ್, ವಿವೇಕ್ ತಂಡದವರು ಉಪಸ್ಥಿತರಿದ್ದರು.