ಬೆಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಪೆಟ್ಟಿಗೆ ಅಂಗಡಿ ನೀಡುವ ಕಾರ್ಯ ತ್ವರಿತವಾಗಿ ಕೈಗೊಳ್ಳದ ಬಿಐಎ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ನೀಡಿ ಎಂದು ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಆನೇಕಲ್, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದ ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಸಂಘ ಸುಸಜ್ಜಿತ ಪೆಟ್ಟಿಗೆ ಅಂಗಡಿ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಹೀಗಾಗಿ ಆದಷ್ಟು ಬೇಗ ನೀಡುವಂತೆ ಆಗ್ರಹಿಸಿ ಚಿಲ್ಲರೆ ವ್ಯಾಪಾರಿಗಳು ನಡೆಸಿದ್ದಾರೆ. ಕರ್ನಾಟಕ ಸಂರಕ್ಷಣಾ ವೇದಿಕೆ ಹಾಗೂ ಹಲವು ದಲಿತ ಪರ ಸಂಘಟನೆಗಳು ಬೀದಿ ಬದಿ ವ್ಯಾಪಾರಿಗಳ ಪರ ನಿಂತು ಪೆಟ್ಟಿಗೆ ಅಂಗಡಿಗಳನ್ನು ಕೊಡಿಸುವಂತೆ ಪ್ರತಿಭಟನೆ ನಡೆಸಿದವು. ಬೀದಿ ವ್ಯಾಪಾರಿಗಳ ಪರ ಹೋರಾಟ ಮಾಡುವುದಕ್ಕೂ ಮುನ್ನ ಬಿಐಎ ಪೆಟ್ಟಿಗೆ ಅಂಗಡಿಗಳನ್ನು ತಯಾರಿಸಿದ್ದು ಹಂತ-ಹಂತವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ವಿತರಿಸುವ ಸಿದ್ದತೆ ನಡೆದಿತ್ತು.ಆದರೂ ಕೆಲ ಮಂದಿ ದಲಿತ ಸಂಘಟನೆಗಳು, ಕರ್ನಾಟಕ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಬಿಐಎ ಅಧ್ಯಕ್ಷ ಪ್ರಸಾದ್ ರ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ನಿರೀಕ್ಷಿತ ಮಟ್ಟದಲ್ಲಿ ಬೀದಿ ಬದಿ ವ್ಯಾಪಾರಿಗಳು ಬರಲಿಲ್ಲವಾದ್ದರಿಂದ ಹೋರಾಟ ಮಧ್ಯಾಹ್ನದ ವೇಳೆಗೆ ನಿಂತು ಹೋಯಿತು. ಅಲ್ಲದೇ ಪ್ರತಿಭಟನಾಕಾರರು ಕೂಡಲೇ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರವಾಗಿ ಒಂದು ಲಕ್ಷ ರೂ ನೀಡಬೇಕು ಜೊತೆಗೆ ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು. ಬೀದಿಗೆ ಬಿದ್ದಿರುವ ಮುನ್ನೂರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಬಿಐಎ ನೀಡಿರುವ ಭರವಸೆಯಂತೆ ಇನ್ನೂ ಮೂರು-ನಾಲ್ಕು ತಿಂಗಳು ಪೆಟ್ಟಿ ಅಂಗಡಿಗಳಿಗೆ ಕಾಯಬೇಕಿದೆ. ಅಲ್ಲಿಯವರೆಗೆ ಮಾಡಿರುವ ಸಾಲ, ಶಾಲಾ ಮಕ್ಕಳ ಶುಲ್ಕ, ಕುಟುಂಬ ನಿರ್ವಹಣೆ ನೆನೆದು ನಾಲ್ಕು ತಿಂಗಳು ಕೈ ಚೆಲ್ಲಿ ಕುಳಿತುಕೊಳ್ಳುವ ಸ್ಥಿತಿ ಬೀದಿಬದಿ ವ್ಯಾಪಾರಿಗಳದ್ದು ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.