ದೊಡ್ಡಬಳ್ಳಾಪುರ: ಸಂಚಾರಿ ನಿಯಮಗಳನ್ನು ಪಾಲಿಸುವುದರೊಂದಿಗೆ ರಸ್ತೆ ಸುರಕ್ಷತೆಯಲ್ಲಿ ತಾಳ್ಮೆ ಪ್ರಮುಖ ಸಾಧನವಾಗುತ್ತದೆ ಎಂದು ಜಿಲ್ಲಾಧಿಕಾರಿ ಕರೀಗೌಡ ಚಾಲಕರಿಗೆ ಕಿವಿಮಾತು ಹೇಳಿದ್ದಾರೆ.
ನಗರದ ಕೆಎಸ್‍ಆರ್ಟಿಸಿ ಡಿಪೋನಲ್ಲಿ ರಸ್ತೆ ಸುರಕ್ಷತಾ ದಿನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ, ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು, ಡಿವೈಎಸ್ಪಿ ಮೋಹನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕರೀಗೌಡ, ಮನುಷ್ಯನ ಜೀವನದಲ್ಲಿ ಅಗತ್ಯವಾಗಿ ಬೇಕಿರುವುದು ಸಹನೆ. ಪ್ರಮುಖವಾಗಿ ಕೆಎಸ್‍ಆರ್ಟಿಸಿ ಬಸ್ ಚಾಲಕರು, ನಿರ್ವಾಹಕರು ಪ್ರಯಾಣದ ವೇಳೆ ವೇಗವಾಗಿ ಹೋಗಲು ಯತ್ನಿಸುತ್ತಾರೆ. ತಲುಪುವ ಸ್ಥಳಕ್ಕೆ ಸ್ವಲ್ಪ ತಡವಾದರು ಜಾಗರೂಕತೆಯಿಂದ ನಿಯಮಗಳನ್ನು ಪಾಲಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.
ಕೆಎಸ್ಆರ್ಟಿಸಿ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಮಾತನಾಡಿ, ಪ್ರತಿ ತಿಂಗಳು ಮೂರು ದಿನ ವಿಭಾಗೀಯ ಮಟ್ಟದಲ್ಲಿ ರಸ್ತೆ ಸುರಕ್ಷತಾ ದಿನ ಆಚರಣೆ ಮಾಡಲಾಗುತ್ತೆ. ಈ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಸಿಬ್ಬಂದಿಗಳಿಗೆ ಅರಿವು ಮೂಡಿಸುತ್ತೇವೆ ಎಂದರು.