ದೇವನಹಳ್ಳಿ: ದೇವಸ್ಥಾನದಲ್ಲಿ ಪೂಜೆಯ ನಂತರ ಪ್ರಸಾದವಾಗಿ ನೀಡಿದ ಅರ್ಧ ತೆಂಗಿನಕಾಯಿ ಭಾಗವನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಲು ಕೆಐಎಎಲ್ನಲ್ಲಿ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ. ಅಂತಿಮವಾಗಿ ಪ್ರಯಾಣಿಕನ ದೈವಿಕ ನಂಬಿಕೆಯ ಮೇಲೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ.
ದೆಹಲಿ ಮೂಲದ ಸಂತಾನು ಗಂಗೂಲಿ ಎಂಬುವರು ಆಗಸ್ಟ್ 24ರಂದು ಏರ್ ವಿಸ್ತಾರಾ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸುವವರಿದ್ದರು. ಈ ವೇಳೆ ಸಿಐಎಸ್ಎಫ್ ಸಿಬ್ಬಂದಿ ತಪಾಸಣೆ ನಡೆಸುವಾಗ ಅವರ ಬ್ಯಾಗ್ನಲ್ಲಿದ್ದ ಅರ್ಧ ತೆಂಗಿನಕಾಯಿ ಹೋಳನ್ನು(ಭಾಗ) ತೆಗೆದುಕೊಂಡು ಹೋಗಲು ನಿರಾಕರಿಸಿದರು. ಆಗ ಸಂತಾನು ಗಂಗೂಲಿ ಕೆಲಕಾಲ ಆತಂಕದ ಕ್ಷಣ ಎದುರಿಸಬೇಕಾಯಿತು.
ದಹನಕಾರಿಯಾದ ಒಣ ತೆಂಗಿನಕಾಯಿಯನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ಈ ಕಾರಣದಿಂದ ಸಿಐಎಸ್ಎಫ್ ಸಿಬ್ಬಂದಿ ಅರ್ಧ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿ ನೀಡಿರಲಿಲ್ಲ. ಸಂತಾನೂ ಗಂಗೂಲಿ ತಲಕಾವೇರಿಗೆ ಭೇಟಿ ನೀಡಿದ ಸಮಯದಲ್ಲಿ ಪೂಜೆ ಮಾಡಿಸಿದ್ದರು. ಈ ಸಮಯದಲ್ಲಿ ದೇವರ ಪ್ರಸಾದವಾಗಿ ಅರ್ಧ ತೆಂಗಿನಕಾಯಿ ಹೋಳು, ಹೂವು ಮತ್ತು ಸಿಹಿ ತಿಂಡಿಯನ್ನು ನೀಡಲಾಗಿತ್ತು. ಪ್ರಸಾದವನ್ನು ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ನೀಡುವ ಉದ್ದೇಶದಿಂದ ಅರ್ಧ ತೆಂಗಿನಕಾಯಿ ತೆಗೆದುಕೊಂಡು ಪ್ರಯಾಣಿಸಲು ಸಿದ್ಧರಾಗಿದ್ದರು.
ಪ್ರಸಾದವಾಗಿ ನೀಡಿದ ತೆಂಗಿನಕಾಯಿ ಮೇಲಿದ್ದ ದೈವಿಕ ನಂಬಿಕೆ ಮತ್ತು ಹಸಿ ತೆಂಗಿನಕಾಯಿ ಆಗಿರುವ ಬಗ್ಗೆ ಸಿಐಎಸ್ಎಫ್ ಅಧಿಕಾರಿಗಳಿಗೆ ಮನವರಿಕೆ ಮಾಡಿದ ಬಳಿಕ ತೆಂಗಿನಕಾಯಿ ಹೋಳು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್, ಒಳ ಉಡುಪು, ಶೂ, ಗುದನಾಳದಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟ ಪತ್ತೆ