ನೆಲಮಂಗಲ: ಕೊರೊನಾ ನಿಯಂತ್ರಣಕ್ಕಾಗಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹಾಗೂ ಸ್ಯಾನಿಟೈಸರ್ ಬಳಸಿ ಎನ್ನುವುದು ನಾವು ಕೇಳುವ ಸಾಮಾನ್ಯ ಮಾತುಗಳು. ಆದರೆ ಈ ಬ್ಯಾಂಕ್ನವರು ಒಂದು ಹೆಜ್ಜೆ ಮುಂದೆ ಹೋಗಿ ಬ್ಯಾಂಕ್ನಲ್ಲಿರುವ ಕೊಠಡಿಗಳಿಗೆ ಮಾಸ್ಕ್ ಹಾಕುವ ರೀತಿಯಲ್ಲಿ ಪ್ಲಾಸ್ಟಿಕ್ ಕವರ್ ಹಾಕಿದ್ದಾರೆ. ಈ ಮೂಲಕ ಗ್ರಾಹಕರಿಗೆ ಮತ್ತು ಬ್ಯಾಂಕ್ ಸಿಬ್ಬಂದಿಗೆ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿದ್ದಾರೆ.
ನೆಲಮಂಗಲ ತಾಲೂಕಿನ ಕುಲವನಹಳ್ಳಿ ಕೆನರಾ ಬ್ಯಾಂಕ್ ಶಾಖೆ ಕೊರೊನಾ ರೋಗ ನಿಯಂತ್ರಣಕ್ಕೆ ವಿಶೇಷವಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿರುವುದು ಎಲ್ಲರ ಗಮನ ಸೆಳೆದಿದೆ. ಎಲ್ಲಾ ಬ್ಯಾಂಕ್ಗಳಂತೆ ಇಲ್ಲಿಯೂ ಉಷ್ಣಾಂಶ ತಪಾಸಣೆ ಮಾಡುವುದು, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳವುದಕ್ಕೆ ಕ್ರಮ ತೆಗೆಕೊಳ್ಳಲಾಗಿದೆ. ಅದರ ಹೊರತಾಗಿಯೂ ಬ್ಯಾಂಕ್ ವ್ಯವಸ್ಥಾಪಕರ ಕೊಠಡಿ ಸೇರಿದಂತೆ ಬ್ಯಾಂಕ್ ಕೌಂಟರ್ಗಳನ್ನ ಪ್ಲಾಸ್ಟಿಕ್ ಕವರ್ನಿಂದ ಮುಚ್ಚಲಾಗಿದೆ. ಬ್ಯಾಂಕ್ ಸಿಬ್ಬಂದಿ ಜೊತೆ ಗ್ರಾಹಕರು ವ್ಯವಹರಿಸಲಿಕ್ಕೆ ಅನುಕೂಲವಾಗಲೆಂದು ಪ್ಲಾಸ್ಟಿಕ್ ಕವರ್ನಲ್ಲಿ ಕಿಂಡಿಗಳನ್ನ ಮಾಡಲಾಗಿದೆ.
ಗ್ರಾಹಕರಿಂದ ಸಿಬ್ಬಂದಿಗೆ ಕೊರೊನಾ ವೈರಸ್ ಹರಡದಂತೆ ಬ್ಯಾಂಕ್ ಸಿಬ್ಬಂದಿ ತೆಗೆದುಕೊಂಡಿರುವ ವಿನೂತನ ಮುನ್ನೆಚ್ಚರಿಕೆ ಕ್ರಮ ಜನರ ಗಮನ ಸೆಳೆದಿದೆ.