ಬೆಂಗಳೂರು: ವಾಹನ ಸವಾರರಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಸಂಚಾರಿ ಪೊಲೀಸರಿಂದ ಆರಂಭಿಸಲಾಗಿದ್ದ ನೋ ಹೆಲ್ಮೆಟ್, ನೋ ಪೆಟ್ರೋಲ್ ಅಭಿಯಾನಕ್ಕೆ ಸಿಲಿಕಾನ್ ಸಿಟಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಪರಿಣಾಮಕಾರಿಯಾಗಿ ಅಭಿಯಾನವನ್ನು ಜಾರಿ ಮಾಡಲು ಸತತ ಪ್ರಯತ್ನ ನಡೆಸುತ್ತಿರುವ ಸಿಟಿಯ ಸಂಚಾರ ಪೊಲೀಸರು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದಲೇ ಬಂಕ್ಗಳಲ್ಲಿ ಸಿಸಿಟಿವಿ ಅಳವಡಿಸಲು ಚಿಂತನೆ ನಡೆಸಿದ್ದಾರೆ. ಕಳೆದ ಸೋಮವಾರದಿಂದ ನಗರದಲ್ಲಿ ಬೈಕ್ ಸವಾರರು ಹೆಲ್ಮೆಟ್ ಹಾಕಿಕೊಂಡರೆ ಮಾತ್ರ ಪೆಟ್ರೋಲ್ ಎಂಬ ಅಲಿಖಿತ ನಿಯಮ ಜಾರಿಯಾಗಿತ್ತು. ಇದಕ್ಕೆ ಬೆಂಗಳೂರು ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್, ಪೆಟ್ರೋಲ್ ಬಂಕ್ಗಳಲ್ಲಿ ರಕ್ಷಣೆ ಹಾಗೂ ಸಿಸಿಟಿವಿ ಅಳವಡಿಸುವುದು ಸೇರಿದಂತೆ ಹಲವು ಷರತ್ತು ವಿಧಿಸಿ ಅಭಿಯಾನಕ್ಕೆ ಕೈ ಜೋಡಿಸಲಾಗಿತ್ತು.
ಪೆಟ್ರೋಲ್ ಬಂಕ್ಗಳಲ್ಲಿ ತಲಾ ಎರಡು ಸಿಸಿಟಿವಿ ಕ್ಯಾಮರಾ ಅಳವಡಿಸಿ ಈ ಮೂಲಕ ಹೆಲ್ಮೆಟ್ ಹಾಕಿಕೊಳ್ಳದೆ ಬಂಕ್ಗಳಿಗೆ ಬರುವ ಬೈಕ್ ಸವಾರರಿಗೆ ದಂಡ ಹಾಕಲು ಯೋಜನೆ ರೂಪಿಸಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗುವ ಬೈಕ್ನ ನೋಂದಣಿ ಸಂಖ್ಯೆ ಆಧಾರದ ಮೇಲೆ ದಂಡ ವಿಧಿಸಲು ಚಿಂತಿಸಲಾಗುತ್ತಿದೆ.
ಸಿಸಿಟಿವಿ ಅಳವಡಿಸಿ ನಿಗಾ ವಹಿಸುವುದರಿಂದ ಬಂಕ್ಗಳಲ್ಲಿ ನಡೆಯುವ ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳನ್ನು ತಹಬದಿಗೆ ತರಬಹುದು. ದಂಡದ ಭಯದಿಂದಾದರೂ ಸವಾರರು ಹೆಲ್ಮೆಟ್ ಧರಿಸಲಿದ್ದಾರೆ. ಈ ಮೂಲಕ ಅಪಘಾತ ಪ್ರಮಾಣ ಹಾಗೂ ಸಾವು-ನೋವು ತಡೆಯಬಹುದು ಎನ್ನುತ್ತಾರೆ ಸಂಚಾರಿ ಪೊಲೀಸರು.