ಆನೇಕಲ್ (ಬೆಂಗಳೂರು ಗ್ರಾಮೀಣ): ಬೆಂಗಳೂರು ರಾಜಧಾನಿ ಬೆಳೆದಂತೆ ಹಿಂದೆ ರಾಗಿ ನಾಡು ಎಂದು ಖ್ಯಾತಿ ಗಳಿಸಿದ್ದ ಆನೇಕಲ್ ಭಾಗದಲ್ಲಿ ಕಾಂಕ್ರೀಟ್ ಕಾಡು ಹೆಚ್ಚುತ್ತಿರುವ ಹೊತ್ತಿನಲ್ಲೇ ರಾಗಿ ಮುದ್ದೆಯೇ ಅಪರೂಪವಾಗುತ್ತಿದೆ. ಮುಂದೊಂದು ದಿನ ರಾಗಿ ಮುದ್ದೆ ಮಾಯವಾಗುವ ಹಂತಕ್ಕೆ ಬಂದು ತಲುಪಬಹುದು. ಇಂತಹ ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಸೊಗಡಿನ ನಾಟಿ ಶೈಲಿಯಲ್ಲಿ, ಬೆಂಗಳೂರು - ಸರ್ಜಾಪುರದ ಮಂಥರ ಹೊಟೇಲ್ ಮಾಲೀಕ ಮಹೇಶ್ ಅವರು ನಾಟಿ ಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಿದ್ದರು.
ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ 32 ಸ್ಪರ್ಧಾಳುಗಳು ಭಾಗಿ: ನಾಟಿ ಕೋಳಿ ಸಾರಿನೊಂದಿಗೆ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ರಾಜ್ಯದ ಕುಣಿಗಲ್, ಮಂಡ್ಯ, ಮಾಲೂರು ಸೇರಿದಂತೆ ಬೆಂಗಳೂರಿನ ಹಲವೆಡೆಗಳಿಂದ 32 ಸ್ಪರ್ಧಾಳುಗಳು ಭಾಗಿಯಾಗಿದ್ದರು. ಸ್ಪರ್ಧೆಯಲ್ಲಿ ಅತಿ ಹೆಚು ಮುದ್ದೆ ತಿಂದು ಬೀಗಿದವರಿಗೆ ಮೊದಲನೇ ಬಹುಮಾನವಾಗಿ ಒಂದು ಕುರಿ, ಎರಡನೇ ಬಹುಮಾನ ಎರಡು ಕೋಳಿ ಹಾಗೂ ಮೂರನೇ ಬಹುಮಾನ ಪಡೆದವರಿಗೆ ಒಂದು ನಾಟಿ ಕೋಳಿ ಘೋಷಣೆ ಮಾಡಲಾಗಿತ್ತು.
ಸ್ಪರ್ಧಾರ್ಥಿಗಳಿಗೆ 200 ರೂಪಾಯಿ ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿತ್ತು. ಸ್ಪರ್ಧಾಳುಗಳಿಗೆ ಆರಂಭದಲ್ಲಿ ತಲಾ 250 ಗ್ರಾಂ ತೂಕದ 2 ಮುದ್ದೆಗಳನ್ನು ತಿನ್ನಲು ಕೊಡಲಾಗಿತ್ತು. ಅದನ್ನ ಖಾಲಿ ಮಾಡಿದ ಮೇಲೆ ಮತ್ತಷ್ಟು ಮುದ್ದೆ ನೀಡಲಾಗುತ್ತಿತ್ತು. ಸ್ಪರ್ಧೆಗೆ 30 ನಿಮಿಷದ ವರೆಗೆ ಟೈಂ ನಿಗದಿಪಡಿಸಲಾಗಿತ್ತು. ಯಾರು ಹೆಚ್ಚು ಮುದ್ದೆ ತಿನ್ನುತ್ತಾರೋ ಅವರೇ ಹೆಸರನ್ನು ಸ್ಪರ್ಧೆಯಲ್ಲಿ ಅನೌನ್ಸ್ ಮಾಡಲಾಗುತ್ತಿತ್ತು. ಇದರಿಂದ ಒಬ್ಬರಿಗೊಬ್ಬರು ನಾ ಹೆಚ್ಚು ಅನ್ನುವ ಭರದಲ್ಲಿ ಮುದ್ದೆಗಳನ್ನು ತಿನ್ನಲು ಶುರು ಮಾಡಿದರು. ಆದರೆ, ಸ್ಪರ್ಧಾರ್ಥಿಗಳು ಹೊಟ್ಟೆ ಬಿರಿಯವಂತೆ ನಾಟಿ ಕೋಳಿ ಸಾರು ಮುದ್ದೆ ಸವಿದರು.
ಬರೊಬ್ಬರಿ 13 ಮುದ್ದೆ ತಿಂದ ಹರೀಶ್ ಮಹಾಶಯ: ಕೆಲವರು ಮೂರೇ ಮುದ್ದೆಗೆ ಸಾಕಯ್ತು ಅಂದ್ರೆ, ಇನ್ನೂ ಕೆಲವರು ಆರೇಳು ಮುದ್ದೆ ತಿಂದು ಸುಮ್ನನಾದ್ರು. ಆದರೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ ಹರೀಶ್ ಮಾತ್ರ ಬರೋಬ್ಬರಿ 13 ಮುದ್ದೆ ತಿಂದು ಮೊದಲನೇ ಬಹುಮಾನ ಕುರಿಯನ್ನು ಪಡೆಯುವುದರೊಂದಿಗೆ ಗೆಲುವಿನ ನಗೆ ಬೀರಿದರು. ಎರಡನೇ ಬಹುಮಾನವೂ ಮಾಲೂರಿನ ಸಂಪಂಗೆರೆಯ ಶ್ರೀನಿವಾಸ್ ದಕ್ಕಿತು. ಅವರು ಎರಡು ಕೋಳಿ ಗೆದ್ದರು. ಮೂರನೇ ಬಹುಮಾನವನ್ನು ಸರ್ಜಾಪುರದ ಇಟ್ಟಂಗೂರು ಆನಂದ್ ಎಂಬುವವರು ಪಡೆದುಕೊಂಡರು.
ಕೇಕೆ ಹಾಕಿ ಸ್ಪರ್ಧಾಳುಗಳನ್ನು ಹುರಿದುಂಬಿಸಿದ ಜನ: ಇನ್ನೂ ಈ ಸ್ಪರ್ಧೆ ನೋಡಲು ಸರ್ಜಾಪುರದ ಸುತ್ತಮುತ್ತಲ ಕಡೆಗಳಿಂದ ಸಾಕಷ್ಟು ಜನ ಸೇರಿದ್ದರು. ನಾಟಿ ಕೋಳಿ ಜೊತೆಗೆ ಮುದ್ದೆಗಳನ್ನು ತಿನ್ನುತ್ತ ಬೀಗುತ್ತಿದ್ದ ಸ್ಫರ್ಧಾಳುಗಳಿಗೆ ಕೇಕೆ ಹಾಕಿ ಜನರು ಹುರಿದುಂಬಿಸಿದರು. ಸ್ಪರ್ಧೆಯಲ್ಲಿ ಭಾಗಿಯಾದವರು ಮಾತ್ರ ನಾವು ಗೆಲ್ತೀವೋ ಬಿಡ್ತೀವೋ ಒಟ್ಟಿನಲ್ಲಿ ಕೊಟ್ಟ ಇನ್ನೂರು ರೂಪಾಯಿ ಎಂಟ್ರಿ ಫೀಜ್ ಮೋಸ ಆಗಬಾರ್ದು ಎಂದು ಸಖತ್ತಾಗಿ ಮುದ್ದೆ ತಿಂದ್ರು ...
ಇದನ್ನೂ ಓದಿ: ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ವಿರಾಮ.. ಮನೆ ಮನೆಗಳಲ್ಲಿ ಚಿಕ್ಕಮೇಳ ಸೇವೆ ಪ್ರಾರಂಭ