ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ವಾಣಿಜ್ಯ ಮಳಿಗೆಯ ಹಳೇ ಬಾಡಿಗೆದಾರನೊಬ್ಬ ಹೊಸ ಬಾಡಿಗೆದಾರನಿಗೆ ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ರಾಜಣ್ಣ ಎಂಬುವರು ತಮ್ಮ ವಾಣಿಜ್ಯ ಮಳಿಗೆಯನ್ನು ಶಿವಕುಮಾರ್ ಎಂಬುವರಿಗೆ ಬಾಡಿಗೆಗೆ ನೀಡಿ, ಅಗ್ರಿಮೆಂಟ್ ಸಹ ಮಾಡಿಕೊಂಡಿದ್ದರು. ಆದರೆ, ಶಿವಕುಮಾರ್ ಎಂಬುವರು ಮತ್ತೊಬ್ಬ ವ್ಯಕ್ತಿಗೆ ಬಾಡಿಗೆ ನೀಡಿದ್ದಾರೆ. ಎರಡು ವರ್ಷಗಳಿಂದ ವಾಣಿಜ್ಯ ಮಳಿಗೆ ಮಾಲೀಕರಿಗೆ ಬಾಡಿಗೆ ಹಣ ನೀಡಿರಲಿಲ್ಲ. ಜೊತೆಗೆ ಅಗ್ರಿಮೆಂಟ್ ಅವಧಿಯೂ ಮುಗಿದಿತ್ತು.
ಬಾಡಿಗೆಯಿಲ್ಲದೇ ಕಂಗಾಲಾಗಿದ್ದ ಮಳಿಗೆ ಮಾಲೀಕ ರಾಜಣ್ಣ, ಬಾಶೆಟ್ಟಿಹಳ್ಳಿಯ ಸಿದ್ದರಾಜು ಎಂಬುವರೊಂದಿಗೆ ಹೊಸದಾಗಿ ಬಾಡಿಗೆಯ ಅಗ್ರಿಮೆಂಟ್ ಮಾಡಿಕೊಂಡಿದ್ದರು. ಬಟ್ಟೆ ಅಂಗಡಿ ನಡೆಸುವ ಕಾರಣಕ್ಕೆ ಬಾಡಿಗೆ ಪಡೆದಿದ್ದ ಸಿದ್ದರಾಜು, ಅಂಗಡಿ ಖಾಲಿ ಮಾಡುವಂತೆ ಶಿವಕುಮಾರ್ ಅವರನ್ನ ಕೇಳಿದ್ದಾರೆ.
ಇದರಿಂದ ಕೋಪಿತಗೊಂಡ ಶಿವಕುಮಾರ್, ಫೆಬ್ರವರಿ 26ರ ಬೆಳಗ್ಗೆ ತನ್ನ ಅಣ್ಣ ಪ್ರೇಮಕುಮಾರ್ ಸೇರಿದಂತೆ 20 ಜನರ ಗ್ಯಾಂಗ್ನೊಂದಿಗೆ ಬಂದು ಬಾಶೆಟ್ಟಿಹಳ್ಳಿಯ ಬಾಂಬೆ ರೆಯಾನ್ ಬಳಿ ಸಿದ್ದರಾಜು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಜಾತಿ ನಿಂದನೆ ಮಾಡಿ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಿದ್ದರಾಜು ಆರೋಪಿಸಿದ್ದಾರೆ.
ಓದಿ: ಕಾರವಾರ: ಸಮುದ್ರ ಪಾಲಾಗುತ್ತಿದ್ದ ಒಂದೇ ಕುಟುಂಬದ ಮೂವರ ರಕ್ಷಣೆ
ಕೊಲೆ ಬೆದರಿಕೆ ಬಗ್ಗೆ ಮಾತನಾಡಿರುವ ಶಿವಕುಮಾರ್ ಹಾಗೂ ಅಣ್ಣ ಪ್ರೇಮಕುಮಾರ್, ಇದೆಲ್ಲ ಕಟ್ಟಡ ಮಾಲೀಕ ರಾಜಣ್ಣನ ಪಿತೂರಿಯಷ್ಟೇ.. ಗ್ರಾಮದಲ್ಲಿ ನಾವೆಲ್ಲಾ ಒಟ್ಟಾಗಿದ್ದೇವೆ. ಇದನ್ನ ಸಹಿಸದ ರಾಜಣ್ಣ, ನಮ್ಮ ನಡುವೆ ದ್ವೇಷದ ಭಾವನೆ ಬಿತ್ತುತ್ತಿದ್ದಾರೆಂದು ಪ್ರತ್ಯಾರೋಪ ಮಾಡಿದ್ದಾರೆ.