ಆನೇಕಲ್ (ಬೆಂ.ಗ್ರಾ): ಎಸ್ಐಟಿಯು ಸಂತ್ರಸ್ತರ ಪ್ರಕರಣಗಳನ್ನು ಮುಚ್ಚಿಹಾಕಲು ಇರುವ ಸಂಸ್ಥೆಯಾಗಿದೆ. ಸರ್ಕಾರ ಎಲ್ಲರಿಗೂ ಒಂದೇ ರೀತಿಯ ಕಾನೂನನ್ನು ಮಾಡಬೇಕು ಎಂದು ಸಂಸದ ಡಿಕೆ ಸುರೇಶ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಆನೇಕಲ್ ತಾಲೂಕಿನ ವ್ಯವಸಾಯೋತ್ಪನ್ನ ಸಂಘದ ವಾಣಿಜ್ಯ ಮಳಿಗೆಯ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಡಿ ವಿಚಾರದಲ್ಲಿ ನಡೆಸುತ್ತಿರುವ ವಿಚಾರಣೆ ರೀತಿಯಲ್ಲಿಯೇ ಇನ್ನು ಮುಂದೆ ಎಲ್ಲ ಪ್ರಕರಣಗಳ ವಿಚಾರಣೆ ಸಹ ನಡೆಯಬೇಕು, ಹಾಗೆಂದು ಎಲ್ಲ ಠಾಣೆಗಳಿಗೆ ಸರ್ಕಾರ ಆದೇಶ ನೀಡಬೇಕು ಇದು ನನ್ನ ಕಿವಿ ಮಾತಾಗಿದೆ ಎಂದರು.
ಸತ್ಯಾಸತ್ಯತೆಯಿಂದ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಅದಕ್ಕೆ ರಾಜಕಾರಣಿ ಅಥವಾ ಸಾಮಾನ್ಯರು ಎಲ್ಲರಿಗೂ ಒಂದೇ ರೀತಿಯಲ್ಲಿರಬೇಕು. ಆಕೆ ಸಂತ್ರಸ್ತೆಯೋ ಅಥವಾ ಸಿಡಿ ಲೇಡಿಯೋ ಎಂಬುದು ತನಿಖೆಯ ನಂತರ ತಿಳಿಯುತ್ತದೆ. ಎಸ್ಐಟಿ ಇಲಾಖೆ ಕೇವಲ ಪ್ರಕರಣಗಳನ್ನು ಮುಚ್ಚಿ ಹಾಕಲು ಇರುವ ಸಂಸ್ಥೆಯಂತಾಗಿದೆ.
ಎಲ್ಲ ರೀತಿಯಲ್ಲಿಯೂ ಸಹ ತನಿಖೆ ಮಾಡುವುದು ಒಂದು ತಿಂಗಳ ಕಾಲಾವಕಾಶ ತೆಗೆದುಕೊಳ್ಳುವುದು ನಂತರ ಅದನ್ನು ಕೈಬಿಡುವುದು ಎಂಬಂತಾಗಿದೆ. ಇದೇ ಸಮಯದಲ್ಲಿ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದರು.