ಆನೇಕಲ್: ಬೇಸಿಗೆಯ ಬಿಸಿ ಹಾಗೂ ಕಾರಿನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಬನ್ನೇರುಘಟ್ಟ- ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ನೈಸ್ ರಸ್ತೆಯಲ್ಲಿ ಅವಘಡ ಸಂಭವಿಸಿದೆ. ತಕ್ಷಣ ವಾಹನ ಚಾಲಕರು ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ ಆರಿಸಲು ಪ್ರಯತ್ನಿಸಿದರೂ ಅದು ತಹಬಂದಿಗೆ ಬಂದಿರಲಿಲ್ಲ.
ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ವಿಚಾರ ಗೊತ್ತಿರದೇ ಜೋರಾಗಿ ಚಲಿಸುತ್ತಿದ್ದ ಚಾಲಕನಿಗೆ ಬೆಂಕಿ ತಗುಲಿರುವ ವಿಚಾರವನ್ನು ಇತರೆ ವಾಹನಗಳ ಸವಾರರು ಗಮನಕ್ಕೆ ತಂದಿದ್ದರು. ಆಗ ತಕ್ಷಣವೇ ಚಾಲಕ ಕಾರು ನಿಲ್ಲಿಸಿ ಹೊರ ಜಿಗಿದಿದ್ದಾನೆ. ಕ್ಷಣಾರ್ಧದಲ್ಲಿ ಕಾರು ಹೊತ್ತಿ ಉರಿದಿದೆ. ನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರೂ ಅಷ್ಟರಲ್ಲಾಗಲೇ ಕಾರು ಸುಟ್ಟು ಭಸ್ಮವಾಗಿದೆ.