ದೊಡ್ಡಬಳ್ಳಾಪುರ : ಈ ಸಚಿವ ಸಂಪುಟ ರಚನೆಯಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿರುವ ಶಾಸಕ ಎಸ್ ಆರ್ ವಿಶ್ವನಾಥ್, ನಗರಾಭಿವೃದ್ಧಿ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವುದಾಗಿ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಚಿವ ಸ್ಥಾನದ ಆಸೆ ಬಿಚ್ಚಿಟ್ಟಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರನಲ್ಲಿ ಹುಟ್ಟಿ ಬೆಳೆದಿರುವುದರಿಂದ ನಗರಾಭಿವೃದ್ಧಿ ಖಾತೆ ಕೊಟ್ಟರೆ ಖಂಡಿತಾ ಸಮರ್ಥವಾಗಿ ನಿರ್ವಹಿಸುವೆ.
ಭವಿಷ್ಯದ ಬೆಂಗಳೂರು ಹೇಗಿರಬೇಕೆಂಬ ಬಗ್ಗೆ ಕನಸಿದೆ ನನಗೆ, ನನ್ನ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದು, ಇದನ್ನೇ ಬೆಂಗಳೂರು ನಗರದಾದ್ಯಂತ ಮಾಡಿದರೆ ಭವಿಷ್ಯದ ಬೆಂಗಳೂರು ಆಗುತ್ತೆ. ಬೆಂಗಳೂರನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಿದರೆ ಹೂಡಿಕೆದಾರರು ಮತ್ತು ಪ್ರವಾಸಿಗರು ಬರುತ್ತಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಜೊತೆ ನೂರಾರು ಸಮಸ್ಯೆಗಳಿವೆ, ವರಿಷ್ಠರು ಅವಕಾಶ ನೀಡಿದರೆ ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ಇದೆ ಎಂದರು. ಯಾವತ್ತು ಸಚಿವ ಸ್ಥಾನಕ್ಕಾಗಿ ಆಸೆ ಪಟ್ಟವನಲ್ಲ ನಾನು, ಮೊದಲ ಬಾರಿಗೆ ಹೇಳುತ್ತಿದ್ದೇನೆ. ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ. 40 ವರ್ಷ ಪಕ್ಷದಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ.
ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ನಾನು ಕೆಲಸ ಮಾಡಿರುವ ಜಾಗ, ನನ್ನ ಸಾಕಷ್ಟು ಸ್ನೇಹಿತರು ಮತ್ತು ಕಾರ್ಯಕರ್ತರು ಇಲ್ಲಿದ್ದಾರೆ, ವರಿಷ್ಠರು ಅವಕಾಶ ನೀಡಿದರೆ ಖಂಡಿತಾ ಜವಾಬ್ದಾರಿ ತೆಗೆದುಕೊಳ್ಳುವೆ. ಉಳಿದ ಎರಡು ವರ್ಷದಲ್ಲಿ ಜನ ಮತ್ತು ವರಿಷ್ಠರು ಮೆಚ್ಚುವ ಕೆಲಸ ಮಾಡುವೆ ಎಂದರು.
ಇದನ್ನೂ ಓದಿ : ಸಚಿವ ಸ್ಥಾನ ಲಾಬಿಗಾಗಿ ದೆಹಲಿಗೆ ತೆರಳಿಲ್ಲ, ಬದಲಾಗಿ ಹಳ್ಳಿ ಕಡೆ ಮುಖ ಮಾಡಿದ್ದೇನೆ : ರೇಣುಕಾಚಾರ್ಯ