ಬೆಂಗಳೂರು: ನಾಗರಿಕರ ಮನೆ ಬಾಗಿಲಿಗೆ ಅವರಿಗೆ ಅಗತ್ಯವಾದ ಸೇವೆಗಳನ್ನು ಪೂರೈಸುವ ಸಕಾಲ ಯೋಜನೆಯ ಮುಖ್ಯ ಕಾರ್ಯಕ್ರಮವಾದ ‘ಜನಸೇವಕ’ ಕಾರ್ಯಕ್ರಮಕ್ಕೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.
ಯಶವಂತಪುರ ಕ್ಷೇತ್ರದ ಉಳ್ಳಾಲ ವಾರ್ಡ್ನಲ್ಲಿ ಮೂವರು ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅವರಿಗೆ ಬೇಕಾದ ಸೇವೆಗಳ ಕುರಿತು ಅಗತ್ಯ ದಾಖಲೆ ನೀಡುವ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಾರ್ವಜನಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ತಲುಪಿಸುವುದು ಯೋಜನೆಯ ಉದ್ದೇಶವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ಯೋಜನೆಯನ್ನು ರಾಜಧಾನಿ ಬೆಂಗಳೂರಿನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೊಳಿಸಲಾಗಿದ್ದು, ನಂತರ ರಾಜ್ಯದ ಇತರೆಡೆಗಳಲ್ಲಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಈ ಯೋಜನೆಯಿಂದ ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯುವುದು ತಪ್ಪಲಿದೆ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮನೆ ಬಾಗಿಲಿಗೆ ಸೇವೆಗಳು ತಲುಪಲಿವೆ ಎಂದು ಸುರೇಶ್ ಕುಮಾರ್ ಹೇಳಿದರು.
ಕ್ಷೇತ್ರದ ಶಾಸಕರೂ ಆದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಯೋಜನೆಗೆ ಚಾಲನೆ ನೀಡಿದ ಸಚಿವದ್ವಯರು ಸಾಂಕೇತಿಕವಾಗಿ ಯಶವಂತಪುರ ಕ್ಷೇತ್ರದ ಮೂವರು ಫಲಾನುಭವಿಗಳ ಮನೆಗೆ ಹೋಗಿ ಅವರು ಕೋರಿದ್ದ ಸೇವೆಗಳ ದಾಖಲಾತಿಗಳನ್ನು ನೀಡಿದರು.
ಜನಸೇವಕ ಯೋಜನೆ ರಾಜಾಜಿನಗರ, ಮಹದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಅನುಷ್ಠಾನಗೊಂಡಿದೆ. ಸದ್ಯದಲ್ಲಿಯೇ ಬೆಂಗಳೂರಿನ ಎಲ್ಲಾ ಕ್ಷೇತ್ರಗಳಿಗೂ ಈ ಕಾರ್ಯಕ್ರಮ ವಿಸ್ತರಿಸುವ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.