ಆನೇಕಲ್: ಬೊಮ್ಮನಹಳ್ಳಿ ವಲಯಕ್ಕೆ ಕೋವಿಡ್-19 ಸೋಂಕಿತ ರೋಗಿಗಳಿಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಬೆಡ್ಗಳ ಜೊತೆಗೆ ಹೆಚ್ಚುವರಿಯಾಗಿ 500 ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ಇಂದು ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಸಭೆ ನಡೆಸಿ, ಪರಿಶೀಲಿಸಿದರು. ವಲಯದಲ್ಲಿ 2 ಸಂಚಾರಿ ವೈದ್ಯಕೀಯ ತಂಡಗಳನ್ನು ಆ್ಯಂಬುಲೆನ್ಸ್ ಸಹಿತ ಸಿದ್ಧಗೊಳಿಸಿ ಸಾರ್ವಜನಿಕರ ಕರೆಗೆ ತುರ್ತಾಗಿ ಸ್ಪಂದಿಸುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಖಾಸಗಿ ಆಸ್ಪತ್ರೆಗಳು ತಮ್ಮ ನಿಗದಿತ ಸಂಖ್ಯೆಯ ಬೆಡ್ಗಳನ್ನು ಇನ್ನೂ ನೀಡದಿರುವ ಕುರಿತಂತೆ ಸಚಿವ ಸುರೇಶ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ, ಬೆಡ್ ನೀಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದರು.
ಸಭೆಯ ನಂತರ ಸಚಿವರು ನೂತನವಾಗಿ ನಿರ್ಮಿಸಿರುವ ಬೊಮ್ಮನಹಳ್ಳಿವಲಯದ ಬಿಬಿಎಂಪಿ ವಾರ್ ರೂಮ್ ಗೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿದ್ದ ಸ್ವಯಂಸೇವಕರೊಂದಿಗೆ ಚರ್ಚೆ ನಡೆಸಿದರು.