ದೊಡ್ಡಬಳ್ಳಾಪುರ: ದೇವಾಲಯಗಳ ಸುತ್ತಮುತ್ತ ಒತ್ತುವರಿಯಾಗಿರುವ ಭೂಮಿಯನ್ನು ಶೀಘ್ರವೇ ಸರ್ವೆ ನಡೆಸಿ ಭೂಮಿ ವಶಪಡಿಸಿಕೊಳ್ಳಲಾಗುವುದು. ಜೊತೆಗೆ, ಮುಜರಾಯಿ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಶಶಿಕಲಾ ಜೊಲ್ಲೆ ಪತಿ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ದೇವಾಲಯಗಳು ಬಂದ್ ಆಗಿರುವುದರಿಂದ ದೇವಾಲಯಕ್ಕೆ ಬರುತ್ತಿದ್ದ ಆದಾಯದಲ್ಲಿ ಬಹಳಷ್ಟು ನಷ್ಟ ಉಂಟಾಗಿದೆ. ಕೋವಿಡ್ ಸೋಂಕಿನ ಪ್ರಮಾಣ ಸಂಪೂರ್ಣವಾಗಿ ಕಡಿಮೆ ಆಗಿರುವ ಜಿಲ್ಲೆಗಳ ದೇವಾಲಯಗಳನ್ನು ಪೂರ್ಣಪ್ರಮಾಣದಲ್ಲಿ ತೆರೆಯಲು ಚಿಂತನೆ ಮಾಡಲಾಗಿದೆ. ಈ ಕುರಿತು ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈ ಹಿಂದೆ ಮುಜರಾಯಿ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಆರಂಭವಾಗಿದ್ದ ಸಪ್ತಪದಿ ಕಾರ್ಯಕ್ರಮವನ್ನು ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೀಗ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಪುನಃ ಪ್ರಾರಂಭಿಸಲಾಗುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಹೆಚ್ಚು ಆದಾಯ ತರುವ ಎ ಗ್ರೇಡ್ ದೇವಾಲಯಗಳನ್ನು ಗುರುತಿಸಿ, ಅವುಗಳ ಆದಾಯದಿಂದ ಸ್ಥಳೀಯ ಅಥವಾ ಜಿಲ್ಲಾ ವ್ಯಾಪ್ತಿಯಲ್ಲಿರುವ ಸಿ ಗ್ರೇಡ್ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ರಾಜ್ಯ ಧಾರ್ಮಿಕ ಪರಿಷತ್ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಮುಜರಾಯಿ ಇಲಾಖೆಯ ಸಿಬ್ಬಂದಿಗೆ ಆರೋಗ್ಯ ಹಾಗೂ ಜೀವ ವಿಮೆ ಯೋಜನೆ ಜಾರಿಗೆ ತರಲು ಚಿಂತಿಸಲಾಗಿದ್ದು, ಅಧಿವೇಶನದ ಬಳಿಕ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ನಾನು, ಸಿದ್ದರಾಮಯ್ಯ ನಾಳೆ ಚಕ್ಕಡಿಗಾಡಿಯಲ್ಲಿ ವಿಧಾನಸೌಧಕ್ಕೆ ಹೋಗ್ತೀವಿ: ಡಿ.ಕೆ.ಶಿವಕುಮಾರ್