ಹೊಸಕೋಟೆ: ನಗರದ ಎಂವಿಜೆ ಆಸ್ಪತ್ರೆಗೆ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಅಲ್ಲಿನ ಕುಂದು ಕೊರತೆಗಳ ಬಗ್ಗೆ ಶಾಸಕ ಶರತ್ ಬಚ್ಚೇಗೌಡ ಮತ್ತು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು.
ಸುಮಾರು 400 ಸೋಂಕಿತರಿಗೆ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಚಿವರು ಇಲ್ಲಿನ ಬೆಡ್ ಬುಕ್ಕಿಂಗ್, ರೋಗಿಗಳ ಆರೈಕೆ, ಊಟದ ವ್ಯವಸ್ಥೆ, ಆಕ್ಸಿಜನ್ ವೆಂಟಿಲೇಟರ್ ಮತ್ತು ರೆಮಿಡಿಸಿವಿರ್ ಇಂಜೆಕ್ಷನ್ಗಳ ಬಗ್ಗೆ ವಿಚಾರಿಸಿದರು. ಜೊತೆಗೆ ಸರ್ಕಾರದಿಂದ ಯಾವ ರೀತಿ ನೆರವು ಬೇಕು ಕೇಳಿ, ಆದಷ್ಟು ಬೇಗ ಸರ್ಕಾರದಿಂದ ಒದಗಿಸಲಾಗುವುದು ಎಂದರು.
ಹೊಸಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು ಹಾಸಿಗೆಯಿರುವ ಹಾಗೂ ಕೊರೊನಾ ಸೋಂಕಿತರಿಗೆ ಮೀಸಲಿಟ್ಟ ಎಂವಿಜೆ ಆಸ್ಪತ್ರೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಜನರಿಗೆ ಉಚಿತವಾಗಿ ಕೋವಿಡ್-19 ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋಬಳಿಗಳ ಮಟ್ಟದಲ್ಲಿ ಸಿಸಿ ಸೆಂಟರ್ ಆರಂಭವಾಗುತ್ತದೆ. ಅಲ್ಲಿ ಏನಾದರೂ ರೋಗಿಗೆ ಸಮಸ್ಯೆ ಹೆಚ್ಚಾದರೆ ಮಾತ್ರ ದೊಡ್ಡ ಆಸ್ಪತ್ರೆಗೆ ಕಳುಹಿಸಲಾಗುತ್ತೆ. ಆಗ ನಿಮಗೆ ಒತ್ತಡ ಕಡಿಮೆಯಾಗುತ್ತೆ ಎಂದು ಆಸ್ಪತ್ರೆ ಆಡಳಿತ ಮಂಡಳಿಗೆ ತಿಳಿಸಿದರು.
ಎಂವಿಜೆ ಆಸ್ಪತ್ರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಸರ್ಕಾರದ ವತಿಯಿಂದ ಬೆಡ್ಗಳನ್ನ ಬುಕ್ ಮಾಡುತ್ತಿದ್ದಾರೆ. ಬೆಂಗಳೂರು ನಗರಕ್ಕೆ ಶೇ. 75 ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ಶೇ. 25ರಷ್ಟು ಬೆಡ್ ಅಲಾರ್ಟ್ ಮಾಡಲಾಗಿದೆ. ಆದರೆ, ನಮ್ಮ ಭಾಗಲ್ಲಿರುವ ಆಸ್ಪತ್ರೆಗಳಲ್ಲಿ ನಮಗೆ ಬೆಡ್ ಸಿಗುತ್ತಿಲ್ಲ. ನಮ್ಮ ಜನ ಸಂಕಷ್ಟ ಸಿಲುಕಿದ್ದಾರೆ. ಇದು ಯಾವ ನ್ಯಾಯ. ಬೆಂ.ಗ್ರಾಂ ಸೋಂಕಿತರಿಗೆ ಶೇ. 25ರಷ್ಟು ಬೆಡ್ ಸಾಕುಗುತ್ತಿಲ್ಲ, ಕನಿಷ್ಠ 50ರಷ್ಟು ಮಾಡುವಂತೆ ಶಾಸಕ ಶರತ್ ಬಚ್ಚೇಗೌಡ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಫಲಿತಾಂಶ ಮುರ್ನಾಲ್ಕು ದಿನಗಳ ಕಾಲ ನಿಧಾನವಾಗುತ್ತಿದೆ. ಇದರಿಂದ ಸೋಂಕಿತ ವ್ಯಕ್ತಿ ತುಂಬಾ ಅನಾರೋಗ್ಯಕ್ಕೆ ತುತ್ತಾಗಿ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಎಂಟಿಬಿ ನಾಗರಾಜ್ ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಪ್ರತಿದಿನ ಸಾಕಷ್ಟು ಟೆಸ್ಟ್ಗಳು ನಡೆಯುತ್ತಿವೆ. ಆದ್ದರಿಂದ ನಿಧಾನವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಓದಿ: ತೆಲಂಗಾಣದಲ್ಲೂ ಲಾಕ್‌ಡೌನ್?: ಇಂದು ನಿರ್ಧಾರ ಪ್ರಕಟಿಸಲಿರುವ ಸಿಎಂ ಕೆಸಿಆರ್