ನೆಲಮಂಗಲ: ಗೋಹತ್ಯೆ ನಿಷೇಧ ಕಾಯ್ದೆ ಜಾರಿ ನಂತರ ಜಾನುವಾರುಗಳು ಕಸಾಯಿಖಾನೆಗಳಿಗೆ ಹೋಗುವುದನ್ನು ತಡೆಗಟ್ಟಿ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ ಚವ್ಹಾಣ್ ತಿಳಿಸಿದರು.
ನೆಲಮಂಗಲ ತಾಲೂಕಿನ ಕೋಡಿಗೆಯಲ್ಲಿ ಜಿಲ್ಲಾ ಸರ್ಕಾರಿ ಗೋಶಾಲೆ ಲೋಕಾರ್ಪಣೆಗೊಳಿಸಿ, ಗೋಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಕ್ರಮ ಕಸಾಯಿಖಾನೆಗಳಿಗೆ ಮುಚ್ಚುವ ಉದ್ದೇಶದಿಂದಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಕಾಯ್ದೆ ಜಾರಿಯಿಂದ ಗೋವುಗಳ ರಕ್ಷಣೆಗಾಗಿ ಜಿಲ್ಲಾ ಮಟ್ಟದಲ್ಲಿ ಗೋಶಾಲೆಗಳನ್ನು ಸ್ಥಾಪನೆಗೆ ಮುಂದಾಗಿದ್ದರ ಫಲವೇ ಇಂದು ಲೋಕಾರ್ಪಣೆಯಾಗಿರುವ ಗೋಶಾಲೆಯಾಗಿದೆ. ಮೂಕ ಪ್ರಾಣಿಗಳ ರಕ್ಷಣೆಯಾಗಬೇಕು ಎನ್ನುವುದೇ ನಮ್ಮ ಸರ್ಕಾರದ ಸಂಕಲ್ಪ ಎಂದರು.
ಜಾನುವಾರುಗಳ ಆರೈಕೆಗೆ ಬೆನ್ನೆಲುಬಾಗಿ ನಿಲ್ಲುವ ಸಲುವಾಗಿ ರಾಜ್ಯದಲ್ಲಿ ಪಶು ಸಂಜೀವಿನಿ ಆಂಬ್ಯುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿವೆ. ಜಾನುವಾರುಗಳ ಸಮಸ್ಯೆ ಬಗ್ಗೆ ಬರುವ ಸಾರ್ವಜನಿಕರಿಗೆ ಕೂಡಲೇ ಸ್ಪಂದಿಸಿ, ಜಾನುವಾರುಗಳ ಪಾಲನೆ, ಪೋಷಣೆ, ಆರೈಕೆ ಮತ್ತು ಪಶು ಆರೋಗ್ಯ ಸೇವೆಗಾಗಿ ಪಶುಸಂಗೋಪನೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಭು ಚವ್ಹಾಣ್ ವಿವರಿಸಿದರು.
ಸರ್ಕಾರದ ಜನಪರ ಯೋಜನೆಗಳಾದ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಕಲ್ಯಾಣ ಮಂಡಳಿ, ಪಶು ಸಹಾಯವಾಣಿ 1962, ಪಶು ಸಂಜೀವಿನಿ ಆಂಬ್ಯುಲೆನ್ಸ್ , ಪಶು ಸಂಚಾರಿ ಚಿಕಿತ್ಸಾಲಯ, ಪಶು ಚಿಕಿತ್ಸಾಲಯಗಳು, ಗೋಶಾಲೆಗಳ ನಿರ್ಮಾಣ, ಗೋಮಾತಾ ಸಹಕಾರ ಸಂಘ, ಪುಣ್ಯಕೋಟಿ ದತ್ತು ಯೋಜನೆ, 400 ಪಶು ವೈದ್ಯರ ನೇಮಕಾತಿ, 250 ಪಶು ವೈದ್ಯಕೀಯ ಪರಿವೀಕ್ಷಕರ ನೇಮಕಾತಿ, ಇಲಾಖೆಯಲ್ಲಿ ಮುಂಬಡ್ತಿ ಹಾಗೂ ಆಡಳಿತಕ್ಕೆ ವೇಗ ಹೆಚ್ಚಿಸಿರುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಲಾಗಿದೆ. ಈ ಯೋಜನೆಗಳನ್ನು ಜನರಿಗೆ ತಲುಪಿಸಲು ಶ್ರಮಿಸಲಾಗುತ್ತಿದೆ ಎಂದು ಅವರು ಹೇಳಿದರು.
31 ಹಸು ದತ್ತು ಪಡೆದ ಸುಧಾಕರ್: ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 11 ಹಸು ಪಡೆದರು. ನಾನು ಕೂಡ 31 ಹಸುಗಳನ್ನು ಜಿಲ್ಲೆಗೊಂದರಂತೆ ಗೋವು ದತ್ತು ಪಡೆದಂತೆಯೇ ಚಿತ್ರನಟ ಸುದೀಪ್ ಕೂಡ ದತ್ತು ಪಡೆದಿದ್ದಾರೆ. ನೀವು ಜಿಲ್ಲೆಗೊಂದರಂತೆ 31 ಗೋವುಗಳನ್ನು ದತ್ತು ಪಡೆಯುವಂತೆ ಸಲಹೆ ನೀಡಿದರು.
ಪ್ರಭು ಚವ್ಹಾಣ್ ಅವರ ಮನವಿಗೆ ಸ್ಪಂದಿಸಿದ ಸಚಿವ ಡಾ. ಸುಧಾಕರ್ ಕೂಡ 31 ಗೋವು ದತ್ತು ಪಡೆಯುತ್ತೇನೆ ಎಂದರು. ಶಾಸಕ ಡಾ. ಶ್ರೀನಿವಾಸಮೂರ್ತಿ, ಮಾಜಿ ಶಾಸಕ ನಾಗರಾಜು ಅವರು ತಲಾ 5 ಗೋವು ದತ್ತು ಪಡೆಯುತ್ತೇನೆ ಎಂದರು.
ಓದಿ: ಗೋರಕ್ಷಣೆಗೆ ಸರ್ಕಾರಿ ನೌಕರರಿಂದ ವಂತಿಕೆ: ಡಿ ವೃಂದಕ್ಕೆ ರಿಯಾಯಿತಿ, ಇದು ಕಡ್ಡಾಯವಲ್ಲ