ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): "ಇಂಡಿಯಾ ಮೈತ್ರಿಕೂಟದ ನಾಯಕರ ವರ್ಚುಯಲ್ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಆಯ್ಕೆಯಾಗಿರುವುದನ್ನು ನಾನು ಸ್ವಾಗತಿಸುತ್ತೇನೆ" ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜಣ್ಣ ಮಾದ್ಯಮಗಳೊಂದಿಗೆ ಮಾತನಾಡಿ, "ಕರ್ನಾಟಕ ರಾಜ್ಯಕ್ಕೆ ಮತ್ತು ಅವರ ಹಿರಿತನಕ್ಕೆ ಹಾಗೂ ಮುತ್ಸದ್ದಿತನಕ್ಕೆ ಕೊಟ್ಟ ಗೌರವ ಎಂದು ಭಾವಿಸಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಅನಂತ್ ಕುಮಾರ್ ಹೆಗಡೆ ನಾಲಿಗೆಯನ್ನು ಶುದ್ಧೀಕರಣ ಮಾಡಬೇಕು. ಅವರು ಜ.22ಕ್ಕೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಹೋಗುವುದಕ್ಕೂ ಮೊದಲು ಅವರ ನಾಲಿಗೆಯನ್ನು ಶುದ್ಧೀಕರಣ ಮಾಡಿ ಅಲ್ಲಿಗೆ ಕಳುಹಿಸಬೇಕು. ಅನಂತ್ ಕುಮಾರ್ ಹೆಗಡೆ ಅವರ ಈ ರೀತಿಯ ಹೇಳಿಕೆಗಳು ಇದೆ ಮೊದಲಲ್ಲ, ಕೋಮುವಾದದಿಂದ ಜನರ ಭಾವನೆಗಳನ್ನು ಕೆರಳಿಸಿ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಈಗ ಲೋಕಸಭಾ ಚುನಾವಣೆ ಹತ್ತಿರ ಇರುವುದರಿಂದ ಈ ರೀತಿ ಮಾತನಾಡುತ್ತಾರೆ. ಚುನಾವಣೆ ಮುಗಿದ ಬಳಿಕ ನಾಲ್ಕೂವರೆ ವರ್ಷ ಬಬ್ಬರ ಕೈಗೂ ಸಿಗಲ್ಲ, ಮುಖನೂ ತೋರಿಸಲ್ಲ, ಏನೂ ಮಾತನಾಡುವುದಿಲ್ಲ. ಇದು ಅವರ ಜಾಯಮಾನ, ಅದನ್ನು ಅವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ" ಎಂದು ತಿರುಗೇಟು ನೀಡಿದರು.
ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ನಮ್ಮ ಅಧ್ಯಕ್ಷರು ಗೊಂದಲ ಸೃಷ್ಟಿಯಾಗುತ್ತದೆ, ಆ ವಿಚಾರವಾಗಿ ಯಾರು ಮಾತನಾಡಬಾರದು ಎಂದು ಹೇಳಿದ್ದಾರೆ. ಹಾಗಾಗಿ ನಾನು ಆ ಬಗ್ಗೆ ಏನು ಮಾತನಾಡುವುದಿಲ್ಲ. ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಇನ್ನೂ ಸಿದ್ಧವಾಗಿಲ್ಲ, ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ" ಎಂದರು.
ಸಂಸದೆ ಸುಮಲತಾ ಅವರನ್ನು ಕಾಂಗ್ರೆಸ್ಗೆ ಕರೆತರುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, "ಎಲ್ಲಾ ಪಕ್ಷಗಳ ಅಪೇಕ್ಷೆ ಇರುವುದು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬುದಾಗಿದೆ. ಯಾರು ಗೆಲ್ಲತ್ತಾರೆ ಎಂಬ ನಂಬಿಕೆ ಪಕ್ಷದ ಮುಖಂಡರಲ್ಲಿ ಬರುತ್ತದೆ ಅವರು ಯಾರೇ ಇರಲಿ ಅಂತವರನ್ನು ಕರೆತಂದು ಟಿಕೆಟ್ ಕೊಟ್ಟು, ಅವರು ಗೆಲ್ಲಲು ಏನೆಲ್ಲಾ ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತೇವೆ. ಚೆಲುರಾಯಸ್ವಾಮಿ ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ" ಎಂದು ಹೇಳಿದರು.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ: ಸಿಎಂ ಸಿದ್ದರಾಮಯ್ಯ