ಕೆ.ಆರ್.ಪುರ: ಕೆ ಆರ್ ಪುರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪಗಳು ಬಂದ ಹಿನ್ನೆಲೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ .
ಆಸ್ಪತ್ರೆಗೆ ಸಚಿವರು ಆಗಮಿಸುತ್ತಿದಂತೆ ಡಿಎಚ್ ಓ ಶ್ರೀನಿವಾಸ್ ಕೂಡ ಬಂದಿದ್ದರು. ಎಲ್ಲಾ ವೈದ್ಯರನ್ನ ಕರೆಸಿ ಅಧಿಕಾರಿಗಳೊಡನೆ ಸಭೆ ನಡೆಸುವ ಮೂಲಕ ಕಡಕ್ ಆಗಿ ವಾರ್ನಿಂಗ್ ನೀಡಿದ್ದರು. ಸಭೆ ಮಾಡುವಾಗ ಮಾಧ್ಯಮದವರಿಗೆ ಪ್ರವೇಶ ನೀಡಲಿಲ್ಲ. ಅಧಿಕಾರಿಗಳ ಜೊತೆ ಸಚಿವರು ಗುಪ್ತವಾಗಿ ಸಭೆ ನಡೆಸಿದ್ದು ಮಾತ್ರ ಅನುಮಾನಕ್ಕೆ ಎಡೆಮಾಡಿಕೊಟ್ಟಿತು.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಬೈರತಿ ಬಸವರಾಜ್, ಸರ್ಕಾರಿ ಆಸ್ಪತ್ರೆಯ ವೈಫಲ್ಯತೆಯ ಬಗ್ಗೆ ದೂರುಗಳು ಬಂದಿದ್ದು, ಯಾರಿಗೆ ಕೆಲಸ ನಿರ್ವಹಿಸಲು ಇಚ್ಛೆ ಇಲ್ಲವೋ ಅವರು ಮನೆಗೆ ತೆರಳುವಂತೆ ಸೂಚನೆ ನೀಡಿದ್ದೇನೆ. ಸರ್ಕಾರಿ ಆಸ್ಪತ್ರೆ ಸಾರ್ವಜನಿಕ ಅನುಕೂಲಕ್ಕಾಗಿ ನಿರ್ಮಿಸಿದ್ದು ಬಡರೋಗಿಗಳಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಯಾರೂ ಸಹಕರಿಸದಿಲ್ಲವೋ ಅವರನ್ನು ವರ್ಗಾವಣೆ ಮಾಡಿ ಹೊಸಬರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಒಂದು ವಾರದೊಳಗೆ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ಕೊಡುವುದಾಗಿ ಡಿಎಚ್ ಒ ಭರವಸೆ ನೀಡಿದ್ದಾರೆ. ಜೊತೆಗೆ ಹತ್ತು ದಿನಗಳೊಳಗೆ 50 ಕೋಟಿ ವೆಚ್ಚದಲ್ಲಿ ನೂರು ಬೆಡ್ ಗಳ ವ್ಯವಸ್ಥೆಯುಳ್ಳ ಆಸ್ಪತ್ರೆಗೆ ಗುದ್ದಲಿ ಪೂಜೆ ಮಾಡಲಾಗುವುದು .ರಾಷ್ಟ್ರೀಯ ಹೆದ್ದಾರಿ 72 ಹಾದು ಹೋಗುವುದರಿಂದ ಈ ಭಾಗದಲ್ಲಿ ಅತಿ ಹೆಚ್ಚು ಬಡವರ್ಗದವರು ವಾಸಿಸುತ್ತಿದ್ದು, ಮತ್ತು ನಾಲ್ಕು ವಿಧಾನ ಸಭಾ ಕ್ಷೇತ್ರದ ಜನರು ಈ ಆಸ್ಪತ್ರೆಗೆ ಬರುತ್ತಾರೆ. ಆದ್ದರಿಂದ ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಬೇಕಾಗಿದೆ. ಆಸ್ಪತ್ರೆ ನಿರ್ಮಾಣಕ್ಕೆ ಸಿ ಎಂ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವರು ಸಹಕರಿಸಿದ್ದಾರೆ ಎಂದರು.