ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ನಾಳೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮೇಕೆದಾಟು ಯೋಜನಾ ಸ್ಥಳ ಪರಿಶೀಲಿಸಿ, ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಮೇಕೆದಾಟು ಯೋಜನೆಗೆ ಒತ್ತು ನೀಡಿದ ಸರ್ಕಾರ : ತಮಿಳುನಾಡಿನ ತೀವ್ರ ವಿರೋಧ ಮತ್ತು ಸಾಕಷ್ಟು ಬಾರಿ ಚರ್ಚೆಗೆ ಗ್ರಾಸವಾಗಿದೆ ಮೇಕೆದಾಟು ಯೋಜನೆ. ರಾಜ್ಯದ ಮಹತ್ವಾಕಾಂಕ್ಷೆಯ ಈ ಯೋಜನೆ ಅನುಷ್ಠಾನಕ್ಕೆ ಬಿ ಎಸ್ ಯಡಿಯೂರಪ್ಪ ಸರ್ಕಾರ ಇದೀಗ ಮತ್ತೆ ತಯಾರಿ ನಡೆಸಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈಗಾಗಲೇ ಯೋಜನೆ ಸಂಬಂಧ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ನಾಳೆ ಕನಕಪುರ ತಾಲೂಕಿನ ಸಂಗಮಕ್ಕೆ ಆಗಮಿಸಿ ಮೇಕೆದಾಟು ಯೋಜನೆಯ ಸ್ಥಳ ಪರಿವೀಕ್ಷಣೆ ಮಾಡಲಿದ್ದಾರೆ.
ಏನಿದು ಮೇಕೆದಾಟು ಯೋಜನೆ?: ಇದು ಕುಡಿಯುವ ನೀರು, ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆ ಉದ್ದೇಶಕ್ಕಾಗಿ 9,000 ಕೋಟಿ ರೂ. ವೆಚ್ಚದ ಅಣೆಕಟ್ಟು ಯೋಜನೆಯಾಗಿದೆ. ರಾಮನಗರದ ಜಿಲ್ಲೆ ಮುಗ್ಗೂರು ಅರಣ್ಯ ವಲಯದ ವಾಚಿಂಗ್ ಟವರ್ ಗುಡ್ಡೆಯಿಂದ ಹನೂರು ಅರಣ್ಯ ವಲಯದ ಗುಡ್ಡೆಯ ನಡುವೆ ಒಂಟಿಗುಂಡು ಸ್ಥಳದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣ ಆಗಲಿದೆ. ಈ ಒಂಟಿಗುಂಡು ಸ್ಥಳ ಮೇಕೆದಾಟು ಮತ್ತು ಸಂಗಮದ ಮಧ್ಯ ಇದೆ. ಅಣೆಕಟ್ಟೆ ನಿರ್ಮಾಣವಾಗುವ ಸ್ಥಳದಿಂದ 2 ಕಿಮೀ ದೂರದ ಮೇಕೆದಾಟು ಬಳಿ ಜಲ ವಿದ್ಯುತ್ ಕೇಂದ್ರ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ.
5252.40 ಹೆಕ್ಟೇರ್ ಪ್ರದೇಶದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಉದ್ದೇಶಿಸಲಾಗಿದೆ. 99 ಮೀಟರ್ ಎತ್ತರ, 674.5 ಮೀಟರ್ ಉದ್ದದ ಅಣೆಕಟ್ಟೆಯಲ್ಲಿ 67.2 ಟಿಎಂಸಿ ನೀರು ಸಂಗ್ರಹಿಸುವ ಯೋಜನೆ ಇದಾಗಿದೆ. 4.75 ಟಿಎಂಸಿ ಹೆಚ್ಚುವರಿ ನೀರನ್ನು ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲಾಗುವುದು. ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ.
ಯೋಜನೆಯ ಕಾರ್ಯಸಾಧು ವರದಿ ಪ್ರಕಾರ ಒಟ್ಟು 5252.40 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗುವ ಯೋಜನೆಗೆ 3181.9 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯದ ಪ್ರದೇಶ ಬೇಕಾಗಿದೆ. ಜೊತೆಗೆ 1869.5 ಹೆಕ್ಟೇರ್ ಅರಣ್ಯ ಭೂಮಿ ಸ್ವಾಧೀನಪಡಿಸಬೇಕಾಗಿದೆ. 201 ಹೆಕ್ಟೇರ್ ಜಮೀನು ಕಂದಾಯ ಹಾಗೂ ಖಾಸಗಿ ಭೂಮಿಯಾಗಿದೆ. ಒಟ್ಟು 5 ಹಳ್ಳಿಗಳಾದ ಮಡವಾಳ, ಕೊಂಗೆದೊಡ್ಡಿ, ಸಂಗಮ, ಮುಥತ್ತಿ, ಬೊಮ್ಮಸಂದ್ರ ಮುಳುಗಡೆಯಾಗಲಿವೆ.
ಯೋಜನೆಯ ಸದ್ಯದ ಸ್ಥಿತಿಗತಿ ಹೇಗಿದೆ?: ಮೇಕೆದಾಟು ಯೋಜನೆ 9,000 ಕೋಟಿ ರೂ. ಮೊತ್ತದ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗದ ಅನುಮೋದನೆ ಕೋರಿ 18-01-2019ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಜಲ ಆಯೋಗವು 25-01-2019ರ ಪತ್ರದಲ್ಲಿ ಮೇಕೆದಾಟು ಯೋಜನೆ ವಿವರವಾದ ಯೋಜನಾ ವರದಿಯನ್ನು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಕಳುಹಿಸಿ ಅಭಿಪ್ರಾಯ ಕೋರಿದೆ.
ಯೋಜನೆಗೆ ಅವಶ್ಯವಿರುವ EIA & EMP ವರದಿಗಳನ್ನು ತಯಾರಿಸಲು Terms of Reference (TOR) ಅರ್ಜಿಯನ್ನು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MOEF) ವೆಬ್ಸೈಟ್ನಲ್ಲಿ 20-06-2019ಗೆ ಅಪ್‌ಲೋಡ್ ಮಾಡಲಾಗಿದೆ. ಅದರಂತೆ, ಈ ಪ್ರಸ್ತಾವನೆಯನ್ನು 19-07-2019ರಂದು Expert Appraisal committee ಸಭೆಯಲ್ಲಿ ಸೂಚಿಸಿದಂತೆ ಹೆಚ್ಚುವರಿ ಮಾಹಿತಿಗಳನ್ನು 4-10-2019 ರಂದು MoEF ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಸದ್ಯ ಸಮಗ್ರ ಯೋಜನಾ ವರದಿಯ ಪರಿಶೀಲನೆ ಕೇಂದ್ರ ಜಲ ಆಯೋಗದ ಮುಂದೆ ಇದೆ. ಹಾಗೆಯೇ ಅರಣ್ಯ ಮತ್ತು ಪರಿಸರ ಸಚಿವಾಲಯದ ಒಪ್ಪಿಗೆ ಕೂಡ ಬೇಕಾಗಿದೆ.
ಕೇಂದ್ರ ಅರಣ್ಯ ಇಲಾಖೆ ಹಿಂದೇಟು : ಮೇಕೆದಾಟು ಯೋಜನೆಯಿಂದ 3181.9 ಹೆಕ್ಟೇರ್ ಕಾವೇರಿ ವನ್ಯಜೀವಿ ಅಭಯಾರಣ್ಯದ ಪ್ರದೇಶ ಹಾಗೂ 1869.5 ಹೆಕ್ಟೇರ್ ಅರಣ್ಯ ಭೂಮಿ ಸ್ವಾಧೀನಪಡಿಸಬೇಕಾಗಿದೆ. ಈ ಯೋಜನೆಯಿಂದ ದೊಡ್ಡ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಮುಳುಗಡೆಯಾಗುವುದರಿಂದ ಹುಲಿ, ಆನೆ ಸೇರಿ ಇನ್ನಿತರ ವನ್ಯ ಸಂಕುಲ ನೆಲೆ ಕಳೆದುಕೊಳ್ಳಲಿವೆ. ಸಂಗಮ ಅರಣ್ಯ ಪ್ರದೇಶದಲ್ಲಿನ ಆನೆ ಕಾರಿಡಾರ್ ಕರ್ನಾಟಕ ಮತ್ತು ತಮಿಳುನಾಡುಗಳನ್ನು ಸಂಪರ್ಕ ಕಲ್ಪಿಸುತ್ತದೆ. ಈ ಅರಣ್ಯ ಪ್ರದೇಶದಲ್ಲಿ ಆನೆಗಳು ಹೆಚ್ಚಾಗಿದ್ದು, ಆನೆ ಕಾರಿಡಾರ್‌ಗೂ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದೆ. ಹೀಗಾಗಿ, ಕೇಂದ್ರ ಅರಣ್ಯ ಇಲಾಖೆ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲು ಮೀನಾಮೇಷ ಎಣಿಸುತ್ತಿದೆ ಎನ್ನಲಾಗಿದೆ.
ಪ್ರಕ್ರಿಯೆ ತ್ವರಿತಗೊಳಿಸಲು ಕೇಂದ್ರಕ್ಕೆ ಒತ್ತಡ : ಸಿಎಂ ದೆಹಲಿ ಭೇಟಿ ವೇಳೆ ಮೇಕೆದಾಟು ಯೋಜನೆ ಸಂಬಂಧ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಿತ ಕೇಂದ್ರ ಸಚಿವರಲ್ಲಿ ಚರ್ಚೆ ನಡೆಸಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಸಮಗ್ರ ಯೋಜನಾ ವರದಿ ಪರಿಶೀಲನೆ ಮತ್ತು ಅರಣ್ಯ ಹಾಗೂ ಪರಿಸರ ಇಲಾಖೆ ಯೋಜನೆಗೆ ತ್ವರಿತ ಅನುಮತಿ ನೀಡುವಂತೆ ಕೋರಿ ಸಿಎಂ ಕೇಂದ್ರ ಸಚಿವರ ಮೇಲೆ ಒತ್ತಡ ಹೇರಲಿದ್ದಾರೆ.