ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಕಾಂಗ್ರೆಸ್ ಟಿಕೆಟ್ ಪಟ್ಟಿ ಕೂಡ ಸದ್ಯದಲ್ಲೇ ರಿಲೀಸ್ ಆಗಲಿದೆ. ಮಾಜಿ ಕೇಂದ್ರ ಸಚಿವ ಕೆ ಹೆಚ್ ಮುನಿಯಪ್ಪ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಘೋಷಣೆ ಸಾಧ್ಯತೆ ಇರುವ ಹಿನ್ನೆಲೆ, ಅವರಿಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ಮುಖಂಡರು ಒತ್ತಾಯ ಮಾಡಿದ್ದಾರೆ. ಅಲ್ಲದೇ, ಟಿಕೆಟ್ ನೀಡುವುದನ್ನು ವಿರೋಧಿಸಿ ದೇವನಹಳ್ಳಿ ಕಾಂಗ್ರೆಸ್ನಿಂದ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ನಿಂದ ಸಾಮೂಹಿಕ ರಾಜೀನಾಮೆ: ಕ್ಷೇತ್ರದ ಜನ ಪ್ರತಿನಿಧಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪುರಸಭೆ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಮುಖಂಡರೆಲ್ಲರೂ ಸೇರಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ಸಾಮೂಹಿಕ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಕಾಂಗ್ರೆಸ್ ನಾಯಕರಿಗೆ ಹಸ್ತಾಂತರಿಸಿದ್ದಾರೆ. ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್, ನಾಲ್ಕು ಹೋಬಳಿ ಬ್ಲಾಕ್ ಅಧ್ಯಕ್ಷರು, ಪುರಸಭೆ ಸದಸ್ಯರು ಸೇರಿದಂತೆ 22 ಜನ ಮುಖಂಡರು ಸಾಮೂಹಿಕವಾಗಿ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರವಾನಿಸಿದರು.
ಪಕ್ಷದ ಮುಖಂಡರಿಂದ ಒಮ್ಮತದ ನಿರ್ಧಾರ: ಕೆ. ಹೆಚ್ ಮುನಿಯಪ್ಪಗೆ ಟಿಕೆಟ್ ನೀಡಿದಲ್ಲಿ ಕ್ಷೇತ್ರದಲ್ಲಿ ಪಕ್ಷ ಸೋಲುವ ಭೀತಿ ಇದೆ. ಹೀಗಾಗಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಸ್ಥಳೀಯವಾಗಿ ಕೆಲಸ ಮಾಡಿ ಬೂತ್ ಮಟ್ಟದಲ್ಲಿ ಗುರುತಿಸಿಕೊಂಡವರಿಗೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಪುರಸಭೆ ಸದಸ್ಯರು, ಗ್ರಾಮ ಪಂಚಾಯ್ತಿ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರಿಂದ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.
ರಾಜೀನಾಮೆ ಅಂಗೀಕರಿಸುವಂತೆ ಹೈಕಮಾಂಡ್ ಸಂದೇಶ: ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡದೆ ಕೆ ಹೆಚ್ ಮುನಿಯಪ್ಪ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಮುಖಂಡರು ಕೆ ಹೆಚ್ ಅವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿ, ಇಲ್ಲವೇ ನಮ್ಮ ಸಾಮೂಹಿಕ ರಾಜೀನಾಮೆ ಅಂಗೀಕರಿಸಿ ಅಂತಾ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದಾರೆ.
ಅಭ್ಯರ್ಥಿಗಳು ಬೂತ್ಮಟ್ಟದಲ್ಲಿ ಸಂಪರ್ಕದಲ್ಲಿದ್ದಾರೆ: ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಅವರು ಮಾತನಾಡಿ, ಕೆ ಹೆಚ್ ಮುನಿಯಪ್ಪ ಅವರಿಗೆ ಟಿಕೆಟ್ ನೀಡಬಾರದು ಅಂತ ಅಲ್ಲ. ಈಗಾಗಲೇ ಚುನಾವಣೆಗೆ 40 ದಿನವಷ್ಟೇ ಬಾಕಿ ಇದೆ. ನಮ್ಮಲ್ಲಿ 292 ಬೂತ್ ಇದೆ. ಅವರಿಗೆ ಈ ಬೂತ್ಗಳಲ್ಲಿ ಸಂಪರ್ಕವಿಲ್ಲ. ಈಗಾಗಲೇ ಸಾಕಷ್ಟು ಅಭ್ಯರ್ಥಿಗಳು ಬೂತ್ ಮಟ್ಟದಲ್ಲಿ ಸಂಪರ್ಕದಲ್ಲಿದ್ದಾರೆ. ಅಂತಹ ಅಭ್ಯರ್ಥಿಯನ್ನು ಕೊಟ್ಟರೆ ನಾವು ಗೆಲ್ಲುವುದು ಸುಲಭ.
ಏಕೆಂದರೆ ಇಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಹತ್ತು ವರ್ಷದಿಂದ ಇಲ್ಲಿ ಕಾಂಗ್ರೆಸ್ ಎಂಎಲ್ಎ ಇಲ್ಲ ಇಲ್ಲಿ. ಆದ್ದರಿಂದ ನಮಗೆ ನಮ್ಮ ಕಾಂಗ್ರೆಸ್ ಶಾಸಕರು ಬೇಕು. ಈಗಾಗಲೇ ರಿಪೋರ್ಟ್ನಲ್ಲಿಯೂ ಹೈಕಮಾಂಡ್ನಲ್ಲಿಯೂ ಇದೆ. ಆದ್ದರಿಂದ ಗೆಲ್ಲುವ ಅಭ್ಯರ್ಥಿಯನ್ನು ಇಲ್ಲೇ ಆಯ್ಕೆ ಮಾಡಲಿ ಎಂಬುದು ನಮ್ಮ ಉದ್ದೇಶ ಎಂದರು.
ಎಲ್ಲಾ ಬೂತ್ನಲ್ಲಿಯೂ ಸಂಪರ್ಕ ಸಾಧಿಸುವುದು ಕಷ್ಟ: ಕೆ ಹೆಚ್ ಮುನಿಯಪ್ಪ ಅವರು ಇಲ್ಲಿ ಸೋಲುತ್ತಾರೆ ಎಂಬುದು ನಿಮ್ಮ ಅಭಿಪ್ರಾಯವೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂದರೆ ಪ್ರತಿ ಬೂತ್ನಲ್ಲಿಯೂ ಅವರು ಮುಟ್ಟುವುದಕ್ಕೆ ಆಗುವುದಿಲ್ಲ. ಎಲ್ಲಾ ಬೂತ್ನಲ್ಲಿಯೂ ಸಂಪರ್ಕ ಸಾಧಿಸುವುದು ಕಷ್ಟ ಎಂಬುದು ನಮ್ಮ ಅಭಿಪ್ರಾಯ ಎಂದರು. ಈಗಾಗಲೇ ಸ್ಥಳೀಯ ಮುಖಂಡರು, ನಾಯಕರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿ ನಾವು ನಮ್ಮ ಹೈಕಮಾಂಡ್ಗೆ ಕೊಟ್ಟಿದ್ದೇವೆ. ಯಾರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂಬಂತಹ ವರದಿಯನ್ನು ನಾವು ಸಂಪೂರ್ಣವಾಗಿ ಹೈಕಮಾಂಡ್ಗೆ ಕೊಟ್ಟಿದ್ದೇವೆ. ನಮ್ಮ ಅಭಿಪ್ರಾಯಕ್ಕೆ ಬೆಲೆ ಇಲ್ಲ ಎಂದಾಗ ಕಷ್ಟವಾಗುತ್ತದೆ ಎಂದರು.
ಜನರೊಂದಿಗೆ ಸಂಪರ್ಕದಲ್ಲಿದ್ದರೆ ಗೆಲುವು ಸಾಧ್ಯ: ನಮ್ಮ ಉದ್ದೇಶ ಕಾಂಗ್ರೆಸ್ ಗೆಲ್ಲಬೇಕು ಎಂಬುದು. ಹಾಗಾಗಿ ಯಾರು ಬೂತ್ ಮಟ್ಟದಲ್ಲಿ ಸಂಪರ್ಕ ಹೊಂದಿರುತ್ತಾರೋ ಅವರಿಗೆ ಮಾತ್ರ ಟಿಕೆಟ್ ನೀಡಿ ಎನ್ನುತ್ತಿದ್ದೇವೆ. ಈ ಹಿಂದೆ ಯಾರನ್ನಾದರೂ ಆಯ್ಕೆ ಮಾಡಿ ಗೆಲ್ಲಿಸಬಹುದಿತ್ತು. ಆದರೆ ಈಗ ಸ್ಥಿತಿ ಹಾಗಿಲ್ಲ. ಇವತ್ತು ನೇರವಾಗಿ ಜನರೊಂದಿಗೆ, ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿ ಇದ್ದರೆ ಮಾತ್ರ ಗೆಲ್ಲುವುದು ಸಾಧ್ಯ ಎಂದರು.
ಇದನ್ನೂ ಓದಿ : 'ನಾನು ಮತ್ತೆ ಸಿಎಂ ಆಗಿ ಕ್ಷೇತ್ರಕ್ಕೆ ಬರುತ್ತೇನೆ': ಮುಧೋಳದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ
ಮುನಿಯಪ್ಪ ಪರ ಮತ್ತೊಂದು ಬಣ ಬ್ಯಾಟಿಂಗ್: ಇಂದು ಮಧ್ಯಾಹ್ನದ ನಂತರ ಕಾಂಗ್ರೆಸ್ ಕಚೇರಿಯಲ್ಲಿ ಮತ್ತೊಂದು ಬಣ ಸುದ್ದಿಗೋಷ್ಟಿ ನಡೆಸಿ, ಕೆ.ಹೆಚ್ ಮುನಿಯಪ್ಪ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಮುನಿಯಪ್ಪ ಅವರಿಗೆ ಟಿಕೆಟ್ ನೀಡಿದರೆ ಸುಲಭವಾಗಿ ಗೆಲ್ಲುತ್ತಾರೆ. ದೇವನಹಳ್ಳಿ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಕ್ಷೇತ್ರದಲ್ಲಿ 60 ಸಾವಿರ ಎಡಗೈ ಸಮುದಾಯದ ಮತದಾರರಿದ್ದಾರೆ. ಆದರೆ ದೇವನಹಳ್ಳಿ ಮೀಸಲು ಕ್ಷೇತ್ರವಾದ ನಂತರ ಇಲ್ಲಿಯವರೆಗೂ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಈ ಬಾರಿ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ಒತ್ತಾಯಿಸಿದರು.