ದೊಡ್ಡಬಳ್ಳಾಪುರ: ನಂದಿಬೆಟ್ಟ ಪಕ್ಕದಲ್ಲಿರುವ ಚನ್ನಗಿರಿ ಬೆಟ್ಟದ ತಪ್ಪಲಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.
ಬೆಟ್ಟದ ತಪ್ಪಲಲ್ಲಿ ಇರುವ ಕೆರೆಯಲ್ಲಿ ಮೋಜು ಮಾಡಲು ಬಂದ ಯುವಕರ ತಂಡ ಕೊಲೆ ಮಾಡಿ ಶವವನ್ನು ಬಿಸಾಕಿ ಹೋಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತ ದೇಹದ ಗುರುತು ಪತ್ತೆಯಾಗಿಲ್ಲ. ಅರೆಬೆತ್ತಲೆ ಸ್ಥಿತಿಯಲ್ಲಿದ್ದು, ಕಣ್ಣಿನ ಭಾಗದಲ್ಲಿ ಗಾಯವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಚನ್ನಗಿರಿ ಬೆಟ್ಟಕ್ಕೆ ಪ್ರವಾಸಿಗರ ನಿಷೇಧದ ನಡುವೆಯೂ ಮೋಜು ಮಸ್ತಿ ಮಾಡಲು ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನಿಂದ ಯುವಕರ ದಂಡು ಇಲ್ಲಿಗೆ ಬರುತ್ತಿರುತ್ತದೆ. ಚಿಕ್ಕರಾಯಪ್ಪನಹಳ್ಳಿ ಗ್ರಾಮದ ಕೆರೆ ಅಂಚಿನಲ್ಲಿರುವ ತೆರೆದ ಬಾವಿಯಲ್ಲಿ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಸುಮಾರು 6 ಜನ ಯುವಕರ ತಂಡ ಆಟೋದಲ್ಲಿ ಬಂದು ಈಜುತಿದ್ದರು. ಅನಂತರ ಅದೇ ಆಟೋದಲ್ಲೇ ಚನ್ನಾಪುರದ ಕಡೆಗೆ ತೆರಳಿದ್ದಾರೆ. ಅವರು ಬಂದು ಹೋದ ನಂತರ ಯುವಕನ ಶವ ಪತ್ತೆಯಾಗಿದ್ದು, ಯುವಕರ ತಂಡವೇ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಸ್ಥಳೀಯರು ನೀಡಿದ ಹೇಳಿಕೆಯ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.