ಬೆಂಗಳೂರು: ಬೇಸಿಗೆ ಆರಂಭದಲ್ಲೇ ಬೆಂಗಳೂರಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಮಹಿಳೆಯರು ರೊಚ್ಚಿಗೆದ್ದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗೆ ಮತ ಕೇಳಲು ಬರಲಿ ತಕ್ಕಪಾಠ ಕಲಿಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ. ಕ್ಷೇತ್ರದ ಹೂಡಿ ವಾರ್ಡ್, ಹೂಡಿ ಗಾರ್ಡನ್ (ತಿಗಳರಪಾಳ್ಯ)ದಲ್ಲಿ ತಿಗಳರು, ದಲಿತರೇ ಹೆಚ್ಚು ವಾಸಿಸುತ್ತಿದ್ದು ಕಳೆದ 3 ತಿಂಗಳಿಂದ ನೀರು ಸರಬರಾಜಾಗದೆ ಇಲ್ಲಿನ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಈಗ ಮತ ಕೇಳಲು ಬರಲಿ ತಕ್ಕಪಾಠ ಕಲಿಸುತ್ತೇವೆಂದು ಸ್ಥಳೀಯ ನಿವಾಸಿ ವರಲಕ್ಷ್ಮಿ ಎಚ್ಚರಿಕೆ ನೀಡಿದರು.
ಇನ್ನು ಇಲ್ಲಿನ ಅಕ್ಕ ಪಕ್ಕದ ಶ್ರೀಮಂತರ ಮನೆಗಳಲ್ಲಿ ವಾಟರ್ ಮೀಟರ್ ಇಲ್ಲ. ನಮ್ಮಂತ ಬಡ ದಲಿತರ ಮನೆಗಳಲ್ಲಿ ವಾಟರ್ ಮೀಟರ್ ಅಳವಡಿಸಲಾಗಿದೆ. ಆದರೂ ಶ್ರೀಮಂತರ ಮನೆಗಳಲ್ಲಿ ನೀರು ಬರುತ್ತಿದ್ದು, ಬಡ ದಲಿತರ ಮನೆಗಳಿಗೆ ನೀರಿಲ್ಲವೆಂದು ಆರೋಪಿಸಿರುವ ಮಹಿಳೆಯರು, ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಮತ ಕೇಳಲು ಬಂದವರಿಗೆ ಗ್ರಹಚಾರ ಬಿಡಿಸುತ್ತೇವೆಂದು ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ಶಾಸಕರು ಹಾಗೂ ಕಾರ್ಪೋರೇಟರ್ಗಳು ಮತ ಕೇಳಲು ಮಾತ್ರ ಬರ್ತಾರೆ. ಇತ್ತ ಕಳೆದ ಮೂರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಊರಿನವರೆಲ್ಲ ಶಾಸಕರ ಮನೆಗೆ ಹೋಗಿ ನಮ್ಮ ಕಷ್ಟಗಳನ್ನು ಹೇಳಿದರು ಯಾವುದೇ ಪರಿಹಾರ ಸಿಕ್ಕಿಲ್ಲವೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.