ಆನೇಕಲ್: ಸ್ವಂತ ಸಂಬಂಧದಲ್ಲಿಯೇ ಪ್ರೇಮ ವಿವಾಹವಾಗಿದ್ದರಿಂದ ಆಕ್ರೋಶಗೊಂಡ ಯುವತಿ ಮನೆಯವರು ಯುವಕನ ಖಾಲಿ ಮನೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಪೋಷಕರ ಆಕ್ರೋಶದ ನಡುವೆ ಕೂಡ ಯುವಕ ಸಂಬಂಧದಲ್ಲೇ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದನು. ಇದರಿಂದ ಆಕ್ರೋಶಗೊಂಡಿರುವ ಯುವತಿ ಮನೆಯವರು ಹುಡುಗನ ಖಾಲಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಆನೇಕಲ್ನ ಸರ್ಜಾಪುರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸರ್ಜಾಪುರ-ಗೋಣಿಘಟ್ಟಪುರ ರಸ್ತೆಯ ಸ್ಟೋನ್ಹಿಜ್ ರೆಸಿಡೆನ್ಸಿಯಲ್ಲಿ ವಾಸವಿದ್ದ ಯುವಕನ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾಗಿ ತಿಳಿದು ಬಂದಿದೆ. 26 ವರ್ಷದ ರಾಹುಲ್ ಮೂಲತಃ ಗೋಣಿಘಟ್ಟಪುರದವನಾಗಿದ್ದು, ತನ್ನ ಸಂಬಂಧಿಯಾದ ಮಾರತ್ಹಳ್ಳಿ ಅಯ್ಯಪ್ಪ ಲೇಔಟ್ನಲ್ಲಿ ವಾಸವಿದ್ದ 24 ವರ್ಷದ ರೇಖಾರೆಡ್ಡಿ ಜತೆ ಪ್ರೇಮ ವಿವಾಹವಾಗಿ ನಾಪತ್ತೆಯಾಗಿದ್ದನು.
ಈ ಕುರಿತಂತೆ ರೇಖಾರೆಡ್ಡಿ ಮನೆಯವರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲು ಮಾಡಿದ್ದರು. ಇದರ ಮಧ್ಯೆ ಯುವಕನ ಖಾಲಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಜತೆಗೆ ಸಿಸಿ ಕ್ಯಾಮೆರಾ ಒಡೆದು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಎಸ್ಪಿ ಚೆನ್ನಣ್ಣವರ್, ಎಸ್ಐ ಹರೀಶ್ ರೆಡ್ಡಿ ಪರಿಶೀಲನೆ ನಡೆಸಿದರು.