ದೊಡ್ಡಬಳ್ಳಾಪುರ: ರಸ್ತೆ ಅಭಿವೃದ್ಧಿ ಮಾಡುವ ಸಲುವಾಗಿ ಕೆರೆ ಏರಿಯನ್ನ ಅಗಲೀಕರಣ ಮಾಡಲು ಹೋದ ಜನಪ್ರತಿನಿಧಿಗಳು ಕಾಮಗಾರಿಯನ್ನ ಅರ್ಧಕ್ಕೆ ಬಿಟ್ಟಿದ್ದಾರೆ. ಇದರಿಂದಾಗಿ ಜನರು ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಂದೂಪುರ-ಯಲಹಂಕ ರಾಜ್ಯ ಹೆದ್ದಾರಿಯಿಂದ ದೊಡ್ಡಬಳ್ಳಾಪುರ - ನೆಲಮಂಗಲ ರಸ್ತೆಗೆ ಸಂಪರ್ಕಿಸುವ ರಸ್ತೆ ಕಳೆದ ಎರಡು ದಶಕಗಳಿಂದಲೂ ಡಾಂಬರು ಕಾಣದೆ ಉಳಿದಿತ್ತು. ನಂತರ ಸ್ಥಳೀಯರ ಒತ್ತಾಯದ ಮೇರೆಗೆ ರಸ್ತೆಗೆ ಡಾಂಬರೀಕರಣ ಸಹ ಆಯ್ತು. ಆದರೆ ದೊಡ್ಡತುಮಕೂರು ಕೆರೆ ಏರಿ ಮಾತ್ರ ಡಾಬರೀಕರಣ ಆಗಲೇ ಇಲ್ಲ. ಮಳೆ ಬಂದ್ರೆ ಕೆರೆ ಏರಿ ಕೆಸರಿನ ಗದ್ದೆಯಾಗಿ ಬದಲಾಗುತ್ತದೆ. ಕೆರೆ ಏರಿಯ ಎರಡು ಬದಿ ತಡೆಗೋಡೆ ನಿರ್ಮಾಣವಾಗಿಲ್ಲ. ಕೆಸರಿನ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ವಾಹನ ಚಾಲನೆ ಮಾಡಬೇಕಾದ ಸ್ಥಿತಿ ವಾಹನ ಸವಾರರಿಗೆ ಎದುರಾಗಿದೆ. ಒಂದು ವೇಳೆ ಅಯ ತಪ್ಪಿ ಬಿದ್ದರೆ ಪ್ರಾಣಕ್ಕೆ ಕುತ್ತು. ಮಳೆ ಬಂದರೆ ಕೆರೆ ಏರಿಯ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಈ ಏರಿ ಮೇಲೆ ಹಲವು ಶಾಲಾ ವಾಹನಗಳು ಸಂಚರಿಸುತ್ತವೆ. ಹಾಗಾಗಿ ಅನಾಹುತ ನಡೆಯುವ ಮುನ್ನ ಜನಪ್ರತಿನಿಧಿಗಳು ಡಾಂಬರೀಕರಣ ಮಾಡಬೇಕು ಎನ್ನುವುದು ಸ್ಥಳೀಯರ ಮನವಿಯಾಗಿದೆ