ದೊಡ್ಡಬಳ್ಳಾಪುರ : ತನ್ನ 13 ಸಂಬಂಧಿಗಳನ್ನು ವಂಚಿಸಿ, ವ್ಯಕ್ತಿಯೋರ್ವ ಪಿತ್ರಾರ್ಜಿತ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿರುವ ಆರೋಪ ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ದೊಡ್ಡಬಳ್ಳಾಪುರ ತಾಲೂಕಿನ ಬೈರಸಂದ್ರಪಾಳ್ಯದಲ್ಲಿ ಬೆಳಕಿಗೆ ಬಂದಿದೆ. ಈಗ ಆಸ್ತಿಯಿಂದ ವಂಚಿತರಾದ ಸಂಬಂಧಿಗಳು ವಂಚಕನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
7 ಗಂಡು ಮಕ್ಕಳು, 7 ಹೆಣ್ಣು ಮಕ್ಕಳಿಗೆ ಆಸ್ತಿ ಸೇರಬೇಕಿತ್ತು. ಆದರೆ ವಂಶವೃಕ್ಷದಲ್ಲಿ 13 ಜನರನ್ನು ಕೈಬಿಟ್ಟಿರುವ ಆರೋಪ ಕೇಳಿಬಂದಿದೆ. ಬೈರಸಂದ್ರಪಾಳ್ಯದ ಸರ್ವೆ ನಂಬರ್ 100/2ರ 9 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಕಲಿ ವಂಶವೃಕ್ಷ ಬಳಸಿ ಪವತಿ ಖಾತೆ ಮಾಡಿರುವ ಆರೋಪ ಕೇಳಿಬಂದಿದೆ. ಜಮೀನು 4ನೇ ತಲೆಮಾರಿನ ಪಿತ್ರಾರ್ಜಿತ ಆಸ್ತಿಯಾಗಿದ್ದು, ಇದೇ ಜಮೀನಿನಲ್ಲಿ ಎಲ್ಲರೂ ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಆದರೆ ಇದರಲ್ಲಿನ ಒಬ್ಬ ವ್ಯಕ್ತಿ 13 ಜನರನ್ನ ಹೊರಗಿಟ್ಟು ನಕಲಿ ವಂಶವೃಕ್ಷ ಮಾಡಿಸಿಕೊಂಡು ಉಳಿದವರಿಗೆ ವಂಚಿಸಿದ್ದಾನೆ ಎಂದಿದ್ದಾರೆ ವಂಚನೆಗೆ ಒಳಗಾದವರು.
ಸರ್ವೆ ನಂಬರ್ 100/2ರ ಮೂಲ ವ್ಯಕ್ತಿ ವಸಂತಪ್ಪ. ವಸಂತಪ್ಪನಿಗೆ ಪಾಪಿಗ, ಬೈಲಮ್ಮ, ಕೆಂಪಮ್ಮ, ಕಾವಲಪ್ಪ ಎಂಬ 4 ಮಕ್ಕಳು. ಪಾಪಿಗನಿಗೆ ಮದುವೆಯಾಗಿದ್ದು, ಮಕ್ಕಳಿರಲಿಲ್ಲ. ಕೆಂಪಮ್ಮ ಅವರಿಗೂ ಮದುವೆಯಾಗಿತ್ತು ಮಕ್ಕಳಿರಲಿಲ್ಲ. ಕಾವಲಪ್ಪನಿಗೆ ಮದುವೆಯಾಗಿರಲಿಲ್ಲ. ಬೈಲಮ್ಮ ಅವರಿಗೆ ಮದುವೆಯಾಗಿ ತಿಮ್ಮರಾಯಪ್ಪ ಮತ್ತು ವೆಂಕಟೇಶಪ್ಪ ಎಂಬ ಇಬ್ಬರು ಮಕ್ಕಳಿದ್ದರು. ವೆಂಕಟೇಶಪ್ಪನಿಗೆ 7 ಗಂಡು ಮತ್ತು 7 ಹೆಣ್ಣು ಮಕ್ಕಳಿದ್ದರು. ಈಗ ಈ 14 ಮಕ್ಕಳು ಪಿತ್ರಾರ್ಜಿತ ಆಸ್ತಿಯ ವಾರಸ್ಥಾರರಾಗಿದ್ದಾರೆ.
ಇದನ್ನೂ ಓದಿ:ಗೋಡೆ ಕೊರೆದು 1ಕೆಜಿ ಚಿನ್ನ ಕದ್ದ ಕಳ್ಳರು, ಸಿಸಿಟಿವಿ ಡಿವಿಆರ್ ಕೂಡಾ ಹೊತ್ತೊಯ್ದರು!
ವೆಂಕಟೇಶಪ್ಪನ ಎರಡನೇ ಮಗಳಾದ ಸುಬ್ಬಮ್ಮಳ ಮಕ್ಕಳು ಇಡೀ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಇನ್ನುಳಿದ 13 ಜನರನ್ನು ವಂಶವೃಕ್ಷದಿಂದ ಹೊರಗಿಟ್ಟಿದ್ದಾರೆ. 13 ಜನರ ಗಮನಕ್ಕೆ ಬರದಂತೆ ನಕಲಿ ವಂಶವೃಕ್ಷ ಕೊಟ್ಟು ಮುನಿಯಪ್ಪ, ಕೃಷ್ಣಮೂರ್ತಿ ಮತ್ತು ಕೆಂಪಮ್ಮ ಹೆಸರಿಗೆ 2021ರ ಫೆಬ್ರವರಿ 18ರಂದು ಜಂಟಿ ಖಾತೆ ಮಾಡಿಸಿದ್ದಾರೆ.
ಇದರ ಜೊತೆಗೆ ಪಿತ್ರಾರ್ಜಿತ ಆಸ್ತಿ ಸುಬ್ಬಮ್ಮಳ ಮಕ್ಕಳಿಗೆ ವರ್ಗಾವಣೆಯಾಗಿರುವ ವಿಷಯ ತಿಳಿದು, ಇನ್ನುಳಿದ 13 ಜನರು ಮತ್ತೊಂದು ವಂಶವೃಕ್ಷಕ್ಕೆ ಕನಸವಾಡಿ ನಾಡಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ತಮಗೆ 1 ವರ್ಷದಿಂದ ವಂಶವೃಕ್ಷವನ್ನು ಮಾಡಿಕೊಟ್ಟಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.