ದೊಡ್ಡಬಳ್ಳಾಪುರ: ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ಕಳೆದ 20 ವರ್ಷಗಳಿಂದ ಮೂಲ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು ಮತ್ತು ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಜನಪ್ರತಿನಿಧಿಗಳೇ ಬದುಕಿದ್ದೀರಾ? ಎಂಬ ಫ್ಲೆಕ್ಸ್ ಹಾಕಿ ಅದಕ್ಕೆ ಚಪ್ಪಲಿ ಹಾರ ಹಾಕಿ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿಯ ಜನರು ಮೂಲ ಸೌಕರ್ಯಗಳಿಲ್ಲದೆ ನರಳುತ್ತಿದ್ದಾರೆ. ಹಾಡೋನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತಿರುಮಗೊಂಡನಹಳ್ಳಿಯಲ್ಲಿ 150ಕ್ಕೂ ಹೆಚ್ಚು ಕುಟುಂಬಗಳಿವೆ. ಕೇವಲ ಒಂದೇ ಒಂದು ಬೋರ್ವೆಲ್ ನಿಂದ ಇಡೀ ಗ್ರಾಮಕ್ಕೆ ನೀರು ಸರಬರಾಜು ಆಗುತ್ತದೆ.
ಆದರೆ, ಈ ನೀರು ಯಾವುದಕ್ಕೂ ಸಾಲುತ್ತಿಲ್ಲ. ಗ್ರಾಮದ ರಸ್ತೆಗಳು ಇಲ್ಲಿಯವರೆಗೂ ಕಾಂಕ್ರೀಟ್ ಅಥವಾ ಡಾಬರೀಕರಣವಾಗಿಲ್ಲ. ಇದರಿಂದ ರಸ್ತೆ ತುಂಬೆಲ್ಲ ಹಳ್ಳ ಗುಂಡಿಗಳೇ ತುಂಬಿದೆ. ಚರಂಡಿ ವ್ಯವಸ್ಥೆ ಇಲ್ಲದೆ ಮನೆ ಮುಂದೆಯೇ ಕೊಳಚೆ ನೀರು ನಿಂತು ರೋಗರುಜಿನಗಳಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಭ್ರಷ್ಟಾಚಾರಕ್ಕೆ ಕುಖ್ಯಾತಿ ಪಡೆದಿದೆ. ತಿರುಮಗೊಂಡನಹಳ್ಳಿಯಲ್ಲಿ ಕೆಲವು ಕಾಮಗಾರಿಗಳು ನಡೆದಿರುವ ಬಗ್ಗೆ ಪಂಚಾಯತ್ ರಾಜ್ ಇಲಾಖೆಯ ವೆಬ್ಸೈಟ್ ನಲ್ಲಿ ಹಾಕಲಾಗಿದೆ. ಆದರೆ, ಆ ಕಾಮಗಾರಿಗಳು ಗ್ರಾಮದಲ್ಲಿ ನಡೆದೇ ಇಲ್ಲ. ಭ್ರಷ್ಟ ಜನಪ್ರತಿನಿಧಿಗಳೇ ಗ್ರಾಮದಲ್ಲಿ ನಡೆದಿರುವ ಕಾಮಗಾರಿಗಳು ಎಲ್ಲಿ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.
ಗ್ರಾಮದ ಅಭಿವೃದ್ಧಿಗೆ ಸಂಬಂಧಪಟ್ಟ ಜನಪ್ರತಿನಿಧಿಗಳ ವರ್ತನೆಗೆ ಬೇಸತ್ತ ಯುವಕರ ತಂಡ ಜನಪ್ರತಿನಿಧಿಗಳೇ ನೀವು ಬದುಕಿದ್ದೀರಾ ಎಂಬ ಫ್ಲೆಕ್ಸ್ ಅನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ಹಾಕಿ, ಫ್ಲೆಕ್ಸ್ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೊಸಗಾ-ಭೀಮಳ್ಳಿ ರಸ್ತೆ ಸಂಪರ್ಕ ಕಡಿತ: ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ