ದೊಡ್ಡಬಳ್ಳಾಪುರ/ಬೆಂಗಳೂರು: "ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನ ಅಧಿಕಾರಕ್ಕೆ ಬಂದಂತೆ" ಎಂದು ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ಸರ್ಕಾರ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
"ಎಲ್ಲಾ ವರ್ಗದ ಜನತೆಯ ಕಷ್ಟಗಳನ್ನು ಕೇಳಿ ಬಗೆಹರಿಸುವ ಸಲುವಾಗಿ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ದೇಶದ ಜನತೆ ತಮ್ಮ ನೋವನ್ನು ನಮ್ಮ ಬಳಿ ಹಂಚಿಕೊಳ್ಳುತ್ತಿದ್ದಾರೆ. ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಯ ಕರ್ಮಕಾಂಡವನ್ನು ಪ್ರಜೆಗಳು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಕೋಮುವಾದಿ ಬಿಜೆಪಿ ಪಕ್ಷವನ್ನು ದೂರ ಇರಿಸುವ ಕಾರಣಕ್ಕೆ ಜೆಡಿಎಸ್ಗೆ ಬೆಂಬಲ ನೀಡಿ ಅಧಿಕಾರ ನೀಡಿದೆವು. ನಾವು ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ಪಾಪ ಕುಮಾರಸ್ವಾಮಿ ಕೈಯ್ಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ, ಈ ಭಾಗದ ಜೆಡಿಎಸ್ನ ಎಂಎಲ್ಸಿಗಳಾದ ಬೆಮೆಲ್ ಕಾಂತರಾಜು, ಸಿ.ಆರ್.ಮನೋಹರ್, ವೈ.ಎಸ್.ವಿ ದತ್ತಾ ಸೇರಿದಂತೆ ಹತ್ತಾರು ಜೆಡಿಎಸ್ ನಾಯಕರು ಪಕ್ಷಕ್ಕೆ ಸೇರ್ಪಡೆಯಾದರು" ಎಂದರು.
"ರಾಜಕೀಯದಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಕಾಂಗ್ರೆಸ್ ಪಕ್ಷ ಒಂದು ಸಿದ್ಧಾಂತದ ಮೇಲೆ ನಿಂತಿದೆ. ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ನಡೆಯುತ್ತಿದೆ. ಬೆಳಗಾವಿಯ ಬಿಜೆಪಿ ಶಾಸಕರೊಬ್ಬರು ಒಂದು ಮತಕ್ಕೆ 6 ಸಾವಿರ ರೂ. ಕೊಟ್ಟು 10 ಕೋಟಿ ರೂ ಖರ್ಚು ಮಾಡಿ ಚುನಾವಣೆ ಮಾಡುತ್ತೇವೆ ಎಂದಿದ್ದಾರೆ. ಕೇವಲ ಹಣದಿಂದ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ ಎಂದು ಮಾತನಾಡುತ್ತಿದ್ದಾರೆ. ಆದರೆ ಇಡಿ, ಐಟಿ ಏನು ಮಾಡುತ್ತಿದೆ" ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನಾವು ಯಾರೂ ಗೆದ್ದೆತ್ತಿನ ಬಾಲ ಹಿಡಿಯಲಿಕ್ಕೆ ಹೋಗಿಲ್ಲ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
"ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಕೊಡದಿದ್ದರೆ ಕೆಲಸ ಆಗುವುದಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಮಾಡಿದ ಭ್ರಷ್ಟಾಚಾರಕ್ಕೆ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾವು ವಿಧಾನಸಸೌಧದಲ್ಲಿ ಹೋರಾಟ ಮಾಡಿದಾಗ ಈಶ್ವರಪ್ಪ ರಾಜೀನಾಮೆ ನೀಡಿದರು. ಸದ್ಯಕ್ಕೆ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಚಿವ ಭೈರತಿ ಬಸವರಾಜ್ ಕಾಟಕ್ಕೆ ಇನ್ಸ್‌ಪೆಕ್ಟರ್ ನಂದೀಶ್ ಸಾವನ್ನಪ್ಪಿದರು" ಎಂದು ಆರೋಪಿಸಿದರು.
ಇದನ್ನೂ ಓದಿ: ಬಿಜೆಪಿಯವರ ಹಗರಣಗಳನ್ನು ಸವಿಸ್ತಾರವಾಗಿ ಬಿಚ್ಚಿಟ್ಟಿದ್ದೇವೆ: ಡಿ ಕೆ ಶಿವಕುಮಾರ್
50 ಕ್ವಿಂಟಲ್ ರಾಗಿ ಖರೀದಿ ಭರವಸೆ: "ನಮ್ಮ ಪಕ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಂದ 50 ಕ್ವಿಂಟಾಲ್ ರಾಗಿ ಖರೀದಿ ಮಾಡುತ್ತೇವೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ. ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಹಾಗೂ ಉದ್ಯೋಗ ಸೃಷ್ಟಿಸಿ ದೇಶವನ್ನು ಕಟ್ಟುವ ಉದ್ದೇಶದಿಂದ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆ" ಎಂದರು.