ದೊಡ್ಡಬಳ್ಳಾಪುರ: ಮೋದಿ ಎಂದರೆ ವಿಷದ ಹಾವಿದ್ದಂಗೆ. ಅದು ವಿಷ ಹೌದೋ ಅಲ್ಲವೋ ಅಂತಾ ನೆಕ್ಕಿ ನೋಡಿದ್ರೆ ಸತ್ತಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಆರ್ ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ಮತಯಾಚನೆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆಸಿದ ಅವರು, ಖರ್ಗೆ ಅವರು ಮಾತುಗಳು ಭ್ರಮೆಗೆ ಒಳಗಾಗಿ ಮಾತನಾಡಿದ್ದು, ಹಾವಿನ ವಿಷ ನೆಕ್ಕಿ ನೋಡಿದ್ರೆ ಅನ್ನುವ ಪದ ಅಶ್ಲೀಲವಾಗಿದೆ. ಯಾರಾದರೂ ಹಾವನ್ನು ನೆಕ್ಕಲು ಹೋಗ್ತಾರಾ ಆ ಕಾಮನ್ ಸೆನ್ಸ್ ಸಹ ಕಾಂಗ್ರೆಸ್ನವರಿಗೆ ಇಲ್ಲ. ಖರ್ಗೆಯಂತವರು ಕೀಳು ಮಟ್ಟದ ಭಾಷೆ ಬಳಸುವ ಮೂಲಕ ಕಾಂಗ್ರೆಸ್ ಕೀಳುಮಟ್ಟವನ್ನು ತೋರಿಸಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅವರು ಮೊದಲು ದೇವಸ್ಥಾನ ಕಂಡ್ರೆ ಓಡಿ ಹೋಗ್ತಿದ್ರು. ಆದರೆ ಇದೀಗ ಎಲ್ಲಿ ನೋಡಿದರೂ ಟೆಂಪಲ್ ರನ್ ಮಾಡ್ತಿದ್ದಾರೆ. ಡಿ ಕೆ ಶಿವಕುಮಾರ್ ಆದರೆ ಹೋಮ ಹವನ ಮಾಡ್ತಿದ್ದಾರೆ. ಇಷ್ಟು ದಿನ ಹಿಂದೂಗಳ ಬಗ್ಗೆ ಅಗೌರವವಾಗಿ ನಡೆದುಕೊಂಡು ತುಷ್ಟೀಕರಣ ಮಾಡ್ತಿದ್ರು. ಏಕಾಏಕಿ ಹಿಂದೂಗಳ ಮೇಲೆ ಕಾಂಗ್ರೇಸ್ ಅವರಿಗೆ ಪ್ರೀತಿ ಬಂದಿದೆ ಎಂದರು.
ಮೊದಲು ಸಿದ್ದರಾಮಯ್ಯ ನಾಮ ಕೇಸರಿ ಬಾವುಟ ಕಂಡ್ರೆ ಏ ತಗಿ ಅಂತಿದ್ರು. ಇದೀಗ ಅವರು ನಾಮವಿಟ್ಟುಕೊಂಡು ಕೇಸರಿ ಬಾವುಟ ಕಂಡ್ರೆ ಕೊಡು ಅಂತಿದ್ದಾರೆ. ಇದೆಲ್ಲ ಎಂತಹ ಡ್ರಾಮಾ ಅನ್ನೋದು ಜನರಿಗೆ ಗೊತ್ತಾಗ್ತಿದೆ ಎಂದು ವ್ಯಂಗ್ಯವಾಗಿ ಟೀಕಿಸಿದರು. ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆಸಿದ ಆರ್ ಅಶೋಕ್, ಮೊದಲಿನಿಂದಲೂ ಅವರು ಕಾಂಗ್ರೆಸ್ ನಲ್ಲೆ ಇದ್ದಾರೆ. ಅವರ ಅಣ್ಣ ತಮ್ಮನ ಜತೆ ಕಾಂಗ್ರೆಸ್ ನಲ್ಲಿದ್ದಾರೆ. ಅವರ ರಾಜಕೀಯ ಸೇರ್ಪಡೆಯಿಂದ ಅಂತದೇನಾಗಲ್ಲ. ರಾಜ್ ಕುಮಾರ್ ಪುನೀತ್ ರಾಜಕುಮಾರ್ ಯಾವತ್ತು ರಾಜಕೀಯ ಸೇರಿದವರಲ್ಲ ಮಾತನಾಡಿದವರಲ್ಲ. ಗೀತ ಶಿವರಾಜ್ ಕುಮಾರ್ ಬಂಗಾರಪ್ಪನ ಪುತ್ರಿ ಹೀಗಾಗಿ ಸೇರ್ತಿದ್ದಾರೆ ಸೇರಲಿ ಬಿಡಿ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಲು ಆಗ್ರಹ: ಮೋದಿ ಅಂದ್ರೆ ವಿಷದ ಹಾವಿದ್ದಂಗೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಅತ್ಯಂತ ಖಂಡನೀಯ. ಖರ್ಗೆ ತಕ್ಷಣ ಬೇಷರತ್ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ ಬಿ ಜೀರಲಿ ಆಗ್ರಹಿಸಿದ್ದಾರೆ.
ಬೆಳಗಾವಿ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಹೇಳಿಕೆಯಿಂದ ಬಿಜೆಪಿ ಕಾರ್ಯಕರ್ತರಿಗೆ, ಮೋದಿ ಅಭಿಮಾನಿಗಳ ಮನಸ್ಸಿಗೆ ನೋವಾಗಿದೆ. ಮಲ್ಲಿಕಾರ್ಜುನ ಖರ್ಗೆ ಈ ದೇಶದ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರು. ಎಐಸಿಸಿ ಅಧ್ಯಕ್ಷ ಎಂಬುದನ್ನು ಮರೆತು ಖರ್ಗೆ ಅವರು ಗಾಂಧಿ ಮನೆತನದ ನೆರಳಿನಂತೆ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ವರುಣಾದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಹಲ್ಲೆಯನ್ನೂ ಖಂಡಿಸುವೆ ಎಂದು ಹೇಳಿದರು.
ಇದನ್ನೂಓದಿ:ಕಾಂಗ್ರೆಸಿಗರು ಜನರನ್ನು ಗುಲಾಮರಂತೆ ತಿಳಿದುಕೊಂಡಿದ್ದಾರೆ: ಸಿಎಂ ಬೊಮ್ಮಾಯಿ