ದೇವನಹಳ್ಳಿ: ಪ್ರೇಮಿಗಳ ದಿನದಂದು ಗುಲಾಬಿ ಹೂವು ಪ್ರಮುಖ ಪಾತ್ರ ವಹಿಸುತ್ತದೆ. ಇದೀಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 2.73 ಲಕ್ಷ ಕೆಜಿ ಗುಲಾಬಿ ಹೂ ದೇಶದ ವಿವಿಧ ರಾಜ್ಯಗಳಿಗೆ ಮತ್ತು ವಿದೇಶಕ್ಕೆ ರಫ್ತಾಗುತ್ತಿದೆ.
ಬೆಂಗಳೂರು ಸುತ್ತಮುತ್ತಲಿನ ವಾತಾವರಣ ಹೂವು ಬೆಳೆಯಲು ಸೂಕ್ತವಾಗಿದ್ದು, ಗುಲಾಬಿ, ಜರ್ಬೆರಾ, ಗ್ಲಾಡಿಯೋಲಸ್ನಂತಹ ಹೂವುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶ ಮತ್ತು ದೇಶದ 41 ಪ್ರದೇಶಗಳಿಗೆ 2.73 ಲಕ್ಷ ಕೆಜಿ ಗುಲಾಬಿ ಹೂವು ರಫ್ತು ಮಾಡಲಾಗಿದೆ.
ಸಿಂಗಾಪುರ, ಲಂಡನ್, ದುಬೈ, ಕುವೈತ್, ಕೌಲಾಲಂಪುರ್, ಆಕ್ಲೆಂಡ್, ಬೈರುತ್ ಮತ್ತು ಮನಿಲಾ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಒಟ್ಟು 1.7 ಲಕ್ಷ ಕೆಜಿ ಗುಲಾಬಿ ಹೂವುವನ್ನು ಕಳುಹಿಸಲಾಗಿದೆ. ಕೋಲ್ಕತ್ತಾ, ದೆಹಲಿ, ಚಂಡೀಗಢ, ಮುಂಬೈ, ಜೈಪುರ, ಚೆನೈ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ 1.03 ಲಕ್ಷ ಕೆಜಿ ಗುಲಾಬಿ ಹೂ ರಫ್ತು ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮದ ರವಿಕುಮಾರ್ ಎಂಬವರು 8 ಎಕರೆ ಪಾಲಿಹೌಸ್ನಲ್ಲಿ ಗುಲಾಬಿ ಬೆಳೆಯುತ್ತಾರೆ. 12 ವಿವಿಧ ಬಣ್ಣದ ಗುಲಾಬಿ ಬೆಳೆಯುವ ಇವರು, 4 ಎಕರೆಯಲ್ಲಿ ಸಂಪೂರ್ಣ ರೆಡ್ ಗುಲಾಬಿ ಬೆಳೆಯುತ್ತಾರೆ. ವ್ಯಾಲೆಂಟೈನ್ಸ್ ಡೇಯಂದು ಗುಲಾಬಿ ಹೂವಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣಕ್ಕೆ ಹೂವುಗಳು ಬರಲು 45 ದಿನಗಳ ಮುನ್ನವೇ ಗುಲಾಬಿ ಗಿಡಗಳನ್ನ ಕಟಾವ್ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ದಿನ ಇರುವ ಹಿನ್ನೆಲೆಯಲ್ಲಿ ಗುಲಾಬಿ ಹೂವು ಮಾರುಕಟ್ಟೆ ತಲುಪಲು ಫೆಬ್ರವರಿ 7 ರಿಂದ ಫೆಬ್ರವರಿ 13ರವರೆಗೂ ಹೂವುಗಳ ಕಟಾವ್ ಮಾಡಲಾಗುತ್ತದೆ. ಪ್ರತಿಗಿಡಕ್ಕೆ ಎರಡು ಹೂಗಳು ಬರುತ್ತದೆ. ಎಕರೆಗೆ 50 ಸಾವಿರ ಹೂಗಳು ಸಿಗುತ್ತದೆ.
ಕಟಾವ್ ಮಾಡಿದ ಗುಲಾಬಿಗಳನ್ನ ಹೆಬ್ಬಾಳದ ಅಂತಾರಾಷ್ಟ್ರೀಯ ಹೂವುಗಳ ಹರಾಜು ಕೇಂದ್ರಕ್ಕೆ ಕಳಿಸಲಾಗುವುದು. ಅಲ್ಲಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶ ಮತ್ತು ದೇಶದ ವಿವಿಧ ಭಾಗಗಳಿಗೆ ರಫ್ತು ಮಾಡಲಾಗುವುದು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಗುಲಾಬಿ ಹೂವಿಗೆ ಹೆಚ್ಚಿನ ಬೇಡಿಕೆ ಇದೆ. ಭಾರತದ ಗುಲಾಬಿಗೆ ವಾಝ್ ಲೈಫ್ ಹೆಚ್ಚು. ಆಫ್ರಿಕಾದ ಗುಲಾಬಿ 4 ದಿನ ಇದ್ದರೆ, ಭಾರತ ಗುಲಾಬಿ 8 ದಿನ ಬಾಳಿಕೆ ಬರುತ್ತದೆ. ವ್ಯಾಲೆಂಟೈನ್ಸ್ ದಿನದಲ್ಲಿ ಪ್ರತಿ ಹೂವಿಗೆ ಗರಿಷ್ಠ 25 ರೂಪಾಯಿ ಇರುತ್ತದೆ. ವರ್ಷದ ಉಳಿದ ದಿನಗಳಲ್ಲಿ 3 ರಿಂದ 5 ರೂಪಾಯಿ ಇರುತ್ತದೆ. ವ್ಯಾಲೆಂಟೈನ್ಸ್ ದಿನದಲ್ಲಿ ರೆಡ್ ಗುಲಾಬಿಗೆ ಹೆಚ್ಚು ಬೇಡಿಕೆ ಇರುತ್ತೆ. ನಂತರ ಹಳದಿ ಗುಲಾಬಿ ಮತ್ತು ಪಿಂಕ್ ಗುಲಾಬಿಗೆ ಬೇಡಿಕೆ ಇರುತ್ತದೆ.
ರೆಡ್ ರೋಸ್ ಪ್ರೇಮಿಗಳಿಗೆ ಮತ್ತು ಯಲ್ಲೋ ರೆಡ್ ಸ್ನೇಹಿತರಿಗಾಗಿ ಖರೀದಿ ಮಾಡುತ್ತಾರೆ. ಒಂದೂವರೆ ತಿಂಗಳ ಸೈಕ್ಲೋನ್ ಎಫೆಕ್ಟ್ ಗುಲಾಬಿ ಹೂವುಗಳ ಮೇಲೆ ಬೀರಿದೆ. ಇದರಿಂದ ಇಳುವರಿ ಕಡಿಮೆಯಾಗಿದೆ. ಆದರೆ ಹೂವಿನ ದರ ಹೆಚ್ಚಿದ ಹಿನ್ನಲೆ ಕಡಿಮೆ ಇಳುವರಿ ಬಂದರೂ ಹೆಚ್ಚು ಬೆಲೆ ಸಿಕ್ಕಿದೆ.
ಹೂವು ಬೆಳೆಗಾರಿಗೆ ಹೊರೆಯಾದ ದುಬಾರಿ ವಿದ್ಯುತ್ ದರ:
ಪಾಲಿಹೌಸ್ನಲ್ಲಿ ಹೂವು ಬೆಳೆಯಲು 24 ಗಂಟೆ ವಿದ್ಯುತ್ ಸರಬರಾಜು ಇರಬೇಕು. ಆದರೆ, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಬೆಳೆಗಳ ಮೇಲೆ ಪರಿಣಾಮ ಬೀರುತ್ತದೆ. ಇತರ ರಾಜ್ಯಗಳಲ್ಲಿ ಪ್ರತಿ ಯೂನಿಟ್ ವಿದ್ಯುತ್ಗೆ 1.5 ರಿಂದ 2 ರೂಪಾಯಿ ದರ ಇದೆ ಮತ್ತು 100 ಯೂನಿಟ್ರವರೆಗೂ ಉಚಿತ ಇದೆ. ಆದರೆ ಕರ್ನಾಟಕದಲ್ಲಿ ಪ್ರತಿವರ್ಷ ಯೂನಿಟ್ 4.5 ರೂಪಾಯಿ ಇದೆ. ಇದರಿಂದ ಪ್ರತಿ ತಿಂಗಳು 60 ರಿಂದ 70 ರೂ. ವಿದ್ಯುತ್ ಬಿಲ್ ಪಾವತಿಸಬೇಕು. ಕೊರೊನಾ ಸಮಯದಲ್ಲಿ ಹೂವಿನ ಮಾರುಕಟ್ಟೆ ಇಲ್ಲದಿದ್ದರು ಸಾಲ ಮಾಡಿ ವಿದ್ಯುತ್ ಬಿಲ್ ಕಟ್ಟಿದ್ದಾಗಿ ಗುಲಾಬಿ ಹೂವು ಬೆಳೆಗಾರರು ತಮ್ಮ ನೋವು ತೋಡಿಕೊಂಡರು.