ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ತಂತ್ರ ರೂಪಿಸಿರುವ ಮೈತ್ರಿ ನಾಯಕರು ನಿನ್ನೆ ಸಭೆ ನಡೆಸಿದರು. ಈ ಸಭೆಯಲ್ಲಿ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಇನ್ನು ನಿನ್ನೆ ಸಿಎಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಮಧ್ಯಾಹ್ನ 1 ಗಂಟೆಯಿಂದ ಮಧ್ಯಾಹ್ನ 3.30ರವರೆಗೂ ನಡೆದ ಸಂಪುಟ ಸಭೆಯಲ್ಲಿ ಸಂಪುಟ ಪುನಾರಚನೆ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕೇಂದ್ರದಲ್ಲಿ ಮತ್ತೊಮ್ಮೆ ಎನ್ಡಿಎ ಬಂದ ಹಿನ್ನೆಲೆಯಲ್ಲಿ ಭಿನ್ನಮತೀಯರನ್ನು ಹಿಡಿದು ನಿಲ್ಲಿಸುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಅತೃಪ್ತ ಶಾಸಕರೊಂದಿಗೆ ನಿರಂತರವಾಗಿ ಸಂಧಾನ ನಡೆಸಲಾಗುತ್ತಿದೆ. ಅತೃಪ್ತಿಯನ್ನು ಕೊನೆಗಾಣಿಸಲು ಸಂಪುಟ ಪುನಾರಚನೆಯೇ ಪ್ರಮುಖ ಮಾರ್ಗ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಹಂತದಲ್ಲಿ ಸಂಪುಟ ಪುನಾರಚನೆ ಮತ್ತು ವಿಸ್ತರಣೆಗೆ ಮೈತ್ರಿ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಮೊದಲ ಹಂತದಲ್ಲಿ ಸಂಪುಟ ವಿಸ್ತರಣೆ ನಡೆಸುವ ಸಾಧ್ಯತೆ ಇದೆ. ಎರಡನೇ ಹಂತದಲ್ಲಿ ಸಂಪುಟ ಪುನಾರಚನೆ ಮಾಡಲು ಮೈತ್ರಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಕೋಟಾದಲ್ಲಿ ಎರಡು ಸಚಿವ ಸ್ಥಾನಗಳು ಖಾಲಿ ಇವೆ. ಕಾಂಗ್ರೆಸ್ನ ಸಿ.ಎಸ್.ಶಿವಳ್ಳಿ ನಿಧನದ ನಂತರ ಆ ಪಕ್ಷದ ಒಂದು ಖಾತೆ ಖಾಲಿ ಉಳಿದಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಹೀನಾಯ ಸೋಲುಂಟಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಇಬ್ಬರು ಹಾಗೂ ಜೆಡಿಎಸ್ನ ಮೂವರು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯೂ ಇದೆ. ಹಾಗಾಗಿ, ಎಂಟು ಮಂದಿಗೆ ಸಂಪುಟ ಸೇರುವ ಭಾಗ್ಯ ಸಿಗಲಿದೆ. ರಮೇಶ್ ಜಾರಕಿಹೊಳಿ ಗುಂಪಿನಲ್ಲಿರುವ ಅತೃಪ್ತ ಶಾಸಕರಿಗೆ ಸಚಿವ ಸ್ಥಾನದ ಆಫರ್ ನೀಡಿ ಅವರನ್ನು ಮೈತ್ರಿ ಪಾಳಯದಲ್ಲೇ ಉಳಿಸಿಕೊಳ್ಳುವುದು ಸರ್ಕಾರದ ಗುರಿಯಾಗಿದೆ ಎನ್ನಲಾಗುತ್ತಿದೆ.
ಜೆಡಿಎಸ್ನಿಂದ ಯಾರಿಗೆ ತಪ್ಪುತ್ತದೆ ಸಚಿವ ಸ್ಥಾನ..?
ಡಿ.ಸಿ.ತಮ್ಮಣ್ಣ, ಎಂ.ಸಿ.ಮನಗೂಳಿ, ಗುಬ್ಬಿ ಶ್ರೀನಿವಾಸ್, ಸಿ.ಎಸ್. ಪುಟ್ಟರಾಜು. ಈ ನಾಲ್ವರಲ್ಲಿ ಮೂವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ನಿಂದ ಯಾರಿಗೆ ತಪ್ಪುತ್ತದೆ ಸಚಿವ ಸ್ಥಾನ..?
ಇನ್ನು ಕಾಂಗ್ರೆಸ್ನಿಂದ ವೆಂಕಟರಮಣಪ್ಪ, ಜಯಮಾಲಾ ಅಥವಾ ಆರ್.ಬಿ.ತಿಮ್ಮಾಪೂರ ಅವರನ್ನು ಸಂಪುಟದಿಂದ ಕೈಬಿಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ರಮೇಶ್ ಜಾರಕಿಹೊಳಿ ಜೊತೆಗೆ ಇತರ ಅತೃಪ್ತ ಶಾಸಕರಾದ ಆರ್.ಶಂಕರ್, ಬಿ.ಸಿ.ಪಾಟೀಲ್, ಬಿ.ನಾಗೇಂದ್ರ, ಮಹೇಶ್ ಕುಮಟಳ್ಳಿ, ಡಾ. ಸುಧಾಕರ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ವಿದೆ. ಆದರೆ, ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎನ್ನಲಾಗಿದೆ. ಒಟ್ಟಾರೆ, ಸಚಿವ ಸಂಪುಟ ಸಭೆಯಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವುದರ ಬಗ್ಗೆ ಹೆಚ್ಚು ಚರ್ಚೆಯಾಗಿರುವುದು ಗಮನಾರ್ಹದ ಸಂಗತಿ.