ಮಹದೇವಪುರ: ಖಾಸಗಿ ಶಾಲೆ ಮತ್ತು ಕೆಲ ಬಿಲ್ಡರ್ಗಳ ಅನುಕೂಲಕ್ಕೆ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಲು ಅಧಿಕಾರಿಗಳು ರಾತ್ರೋರಾತ್ರಿ ರಸ್ತೆ ಡಾಂಬರೀಕಣವನ್ನು ಮಾಡುತ್ತಿದ್ದಾರೆ. ಇದರಿಂದ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶಿಗೇಹಳ್ಳಿ ಸಮೀಪ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವೇದಿಕೆಯ ಕ್ಷೇತ್ರ ಅಧ್ಯಕ್ಷ ಶಾಂತಕುಮಾರ್, ಬೆಂಗಳೂರು ಪೂರ್ವ ತಲೂಕಿನ ಶೀಗೆಹಳ್ಳಿಯಲ್ಲಿ ಖಾಸಗಿ ಶಾಲೆ ಹಾಗೂ ಕೆಲ ಬಿಲ್ಡರ್ಗಳು ಸುಮಾರು 2 ಕಿ.ಮೀ ನಷ್ಟು ದೂರ ಸರ್ಕಾರಿ ಕಾಲುವೆ ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸಿದ್ದಾರೆ. ಇದರಿಂದ ರಸ್ತೆಯ ಅಕ್ಕಪಕ್ಕದ ರೈತರ ಜಮೀನುಗಳಿಗೆ ಮಳೆಯ ನೀರು ನುಗ್ಗಿ ಬೆಳೆ ಹಾನಿ ಉಂಟಾಗುತ್ತಿದೆ ಎಂದು ದೂರಿದರು. ರಸ್ತೆಯ ಅಕ್ಕ-ಪಕ್ಕದ ಚರಂಡಿ ವ್ಯವಸ್ಥೆಯು ಸರಿಯಾಗಿಲ್ಲ, ಇದರಿಂದ ತಗ್ಗು ಪ್ರದೇಶದ ಮನೆಗೆ ನೀರು ನುಗ್ಗುತ್ತಿದೆ, ಮಳೆ ಬಂದರೆ ಜಾಗರಣೆ ಮಾಡಬೇಕಾದ ಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಗೋಮಾಳ, ರಾಜಕಾಲುವೆ ಸೇರಿದಂತೆ ಸರ್ಕಾರಿ ಭೂಮಿಯನ್ನು ರಕ್ಷಿಸಬೇಕಾದ ಅಧಿಕಾರಿಗಳೇ ಖಾಸಗಿ ಶಾಲೆ ಮತ್ತು ಬಿಲ್ಡರ್ಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ರೈತರ ಸಂಕಷ್ಟ ಅರಿತು ಅವರ ಪರ ಧ್ವನಿ ಎತ್ತಲು ನಮ್ಮ ಸಂಘಟನೆ ಮುಂದೆ ಬಂದಿದೆ. ರಾಜಕಾಲುವೆಯನ್ನು ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.