ಆನೇಕಲ್: ಆಟೋಗಳನ್ನು ಕದ್ದು ಮಾರಾಟಕ್ಕೆ ಮುಂದಾಗಿದ್ದ ಚಾಲಾಕಿ ಬಾಲಕರ ಗ್ಯಾಂಗ್ವೊಂದನ್ನು ಜಿಗಣಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಿಕ್ಕಿಬಿದ್ದವರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರ ಕಾಚಿಗುಂಟು ಗ್ರಾಮದ ರಂಗನಾಥ್ ಎಂಬ 20ರ ಪ್ರಾಯದ ಯುವಕ ಮತ್ತು ಮೂವರು ಬಾಲಾಪರಾಧಿಗಳಾಗಿದ್ದಾರೆ. ಇವರೆಲ್ಲ ಸೇರಿ ಆಟೋಗಳನ್ನ ಕಳ್ಳತನ ಮಾಡಿರುವುದು ರಾಜಧಾನಿ ಬೆಂಗಳೂರಿನಲ್ಲೇ ಅನ್ನೋದು ತಿಳಿದುಬಂದಿದೆ.
ಆನೇಕಲ್ನ ಖಾಸಗಿ ಬಸ್ ಕ್ಲೀನರ್ಗಳಾಗಿರುವ ನಾಲ್ವರೂ ಬೆಂಗಳೂರಿನ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾಗ ಒಟ್ಟಿಗೆ ಸೇರುತ್ತಿದ್ದರು. ಅನಂತರ ಚಾಮರಾಜಪೇಟೆ ಸುತ್ತಲೂ ಇರುವ ಮನೆಗಳ ಬಳಿ ಆಟೋಗಳು ನಿಂತಿರುವುದನ್ನು ಕಾತರಿ ಮಾಡಿಕೊಂಡು ಎರಡು-ಮೂರು ದಿನದೊಳಗೆ ಯೋಜನೆ ರೂಪಿಸಿಕೊಳ್ಳುತ್ತಿದ್ದರು. ಅದರಂತೆ ರಾತ್ರಿ ವೇಳೆ ಅಥವಾ ಬೆಳಗಿನಜಾವ ಆಟೋ ಕೀ ವೈರ್ ಡೈರೆಕ್ಟ್ ಮಾಡಿ ಸೀದಾ ಜಿಗಣಿಗೆ ತಲುಪುತ್ತಿದ್ದರು.
ಆನೇಕಲ್-ಹಾರಗದ್ದೆಯ ಮುನಿಸ್ವಾಮಪ್ಪ ಬಡಾವಣೆಯ ರಸ್ತೆಯಲ್ಲಿ ನಿಂತಿದ್ದ ಆಟೋವೊಂದರಲ್ಲಿ ಖಾರದ ಪುಡಿ, ದೊಣ್ಣೆ, ಚಾಕುಗಳಿರುವುದು ಹಾಗೂ ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುವುದನ್ನು ಅಲ್ಲಿನ ನಿವಾಸಿಗಳು ಗಮನಿಸಿದ್ದರು. ಈ ಮಾಹಿತಿ ಜಿಗಣಿ ಸಿಐ ಕೆ. ವಿಶ್ವನಾಥ್ ಕಿವಿಗೆ ತಲುಪಿದ್ದೇ ಅವರು ಕ್ರೈಂ ಟಿ. ಜಿ ರಾಜಣ್ಣ, ಎಂ ಆಂಜಿನಪ್ಪ, ಎಲ್ ರಾಜು, ಕೆ. ಕೆ ಮಹೇಶ್ ಮತ್ತು ಶಿವಪ್ರಕಾಶ್ ತಂಡ ರಚಿಸಿದ್ದರು. ಅನಂತರ ತಂಡವು ಏಕಾಏಕಿ ದಾಳಿ ನಡೆಸಿದಾಗ ನಾಲ್ವರೂ ಆಟೋ ಸಮೇತ ಸಿಕ್ಕಿಬಿದ್ದಿದ್ದಾರೆ. ಬಳಿಕ ತೀವ್ರ ವಿಚಾರಣೆ ನಡೆಸಿದ ಪೊಲೀಸ್ ತಂಡಕ್ಕೆ ಅಚ್ಚರಿಯ ಮಾಹಿತಿವೊಂದು ತಿಳಿದಿದೆ. ಈಗಾಗಲೇ ಈ ಖದೀಮರು ನಾಲ್ಕು ಆಟೋಗಳನ್ನು ಕದ್ದಿರುವುದು ಮತ್ತು ಅವುಗಳನ್ನು ಮಾರಲು ಸಿದ್ಧತೆ ನಡೆಸುತ್ತಿರುವ ಮಾಹಿತಿ ಗೊತ್ತಾಗಿದೆ. ಹೀಗಾಗಿ, ಎಲ್ಲ ಆಟೋಗಳನ್ನು ವಶಕ್ಕೆ ಪಡೆದು ಆಟೋಗಳ ಮಾಲೀಕರನ್ನು ಹುಡುಕಿದಾಗ ಓರ್ವ ಆಟೋ ರಾಜ ಸಿಕ್ಕಿದ್ದು, ಆಟೋವನ್ನು ಅದರ ಮಾಲೀಕನಿಗೆ ಹಸ್ತಾಂತರಿಸಲಾಗಿದೆ.