ಬೆಂಗಳೂರು : ಕೋವಿಡ್ ಪರಿಣಾಮ ಸೀಮಿತ ಅವಧಿಯಲ್ಲಿ ಕೋರ್ಟ್ ಕಲಾಪಗಳ್ನು ನಡೆಸುತ್ತಿರುವ ಸಂದರ್ಭದಲ್ಲಿ ನ್ಯಾಯದಾನವನ್ನು ನಿರಂತರವಾಗಿ ಮುಂದುವರೆಸಲು ಇ-ಲೋಕ್ ಅದಾಲತ್ ವ್ಯವಸ್ಥೆ ಹೆಚ್ಚು ಸೂಕ್ತವಾಗಿದೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಸುಪ್ರೀಂಕೋರ್ಟ್‍ನ ಹಿರಿಯ ನ್ಯಾಯಮೂರ್ತಿ ಎನ್. ವಿ. ರಮಣ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕೈಗೊಂಡಿದ್ದ ಮೆಗಾ ಇ-ಲೋಕ್ ಅದಾಲತ್ನಲ್ಲಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕ ಒಂದೆಡೆ ಸಮಸ್ಯೆಗಳನ್ನು ಸೃಷ್ಟಿಸಿದ್ದರೆ, ಮತ್ತೊಂದೆಡೆ ತಂತ್ರಜ್ಞಾನ ಬಳಕೆಯ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಅದರ ಭಾಗವಾಗಿ ಇ-ಲೋಕ್ ಅದಾಲತ್ ಜಾರಿಯಾಗಿದ್ದು, ಕೋವಿಡ್ನಂತಹ ಕಠಿಣ ಸಂದರ್ಭದಲ್ಲೂ ಜನರಿಗೆ ನ್ಯಾಯದಾನ ನೀಡುತ್ತಿರುವುದು ಪ್ರಶಂಸನೀಯ ಎಂದರು. ಅಲ್ಲದೇ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇ-ಲೋಕ್ ಅದಾಲತ್ ಆಯೋಜಿಸಿರುವ ಕ್ರಮ ಇತರೆ ರಾಜ್ಯಗಳಿಗೆ ಮಾದರಿ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಕಾನೂನು ಸೇವಾ ಪ್ರಾಧಿಕಾರ 7.5 ಲಕ್ಷ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿರುವುದು ಗಮನಾರ್ಹ ವಿಷಯ ಎಂದು ನ್ಯಾ. ರಮಣ ಮೆಚ್ಚುಗೆ ವ್ಯಕ್ತಪಡಿಸಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ, ಎಸ್. ಓಕ ಮಾತನಾಡಿ, ಕೋವಿಡ್ ಹಿನ್ನೆಲೆ ಕೋರ್ಟ್ ಕಲಾಪಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತಿದೆ. ಇದು ಪರಿಣಾಮಕಾರಿ ಮತ್ತು ಯಶಸ್ಸು ಕಂಡ ಹಿನ್ನೆಲೆ ಯಾರೂ ನ್ಯಾಯದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿಡಿಯೋ ಕಾನ್ಫರೆನ್ಸ್ ವಿಧಾನವನ್ನು ಲೋಕ ಅದಾಲತ್ ಗೂ ಅಳವಡಿಸಲು ತೀರ್ಮಾನಿಸಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್, ಎ.ಎಸ್. ಬೋಪಣ್ಣ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹ ಅಧ್ಯಕ್ಷ ನ್ಯಾ. ಅರವಿಂದ ಕುಮಾರ್, ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಬಿ. ವೀರಪ್ಪ, ಎಸ್. ಸುಜಾತ, ಜಿ. ನರೇಂದರ್, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ ನರಗುಂದ, ಮತ್ತಿತರರು ಉಪಸ್ಥಿತರಿದ್ದರು.