ನೆಲಮಂಗಲ: ರಾಜ್ಯದಲ್ಲೇ ಅತೀದೊಡ್ಡ ಕೈಗಾರಿಕಾ ಪ್ರದೇಶ ಹೊಂದಿರುವ ಡಾಬಸ್ಪೇಟೆ ಪಂಚಾಯತ್ಗೆ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಭಾರತೀಪುರ ಲಕ್ಷ್ಮೀದೇವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 25 ಸದಸ್ಯ ಬಲವಿದ್ದ ಗ್ರಾಮ ಪಂಚಾಯತ್ನಲ್ಲಿ 22 ಸದಸ್ಯರ ಬೆಂಬಲದಿಂದ ಆಯ್ಕೆಯಾಗಿದ್ದು, ಮುಂದಿನ ಸುಮಾರು ಆರು ತಿಂಗಳವರೆಗೆ ಅಧ್ಯಕ್ಷರಾಗಿರಲಿದ್ದಾರೆ. ಜೆಡಿಎಸ್ ಬೆಂಬಲಿತ ಲಕ್ಷ್ಮೀದೇವಿ, ಅಧ್ಯಕ್ಷೆ ಸ್ಥಾನಕ್ಕೆ ಹಿಂದುಳಿದ ಮೀಸಲಾತಿ ವರ್ಗದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಂಚಾಯತ್ ರಾಜ್ ಇಲಾಖೆಯ ಪ್ರಭಾರ ಉಸ್ತುವಾರಿ ಎಇಇ ಹೆಚ್.ಎನ್.ಮಂಜುನಾಥ್ ಘೋಷಿಸಿದ್ದಾರೆ.
ಕಳೆದ ಕೆಲದಿನಗಳ ಹಿಂದಿನ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಹನುಮಂತರಾಯಪ್ಪರ, ಏಕರೂಪ ಆಡಳಿತ ಹಾಗೂ ಪಕ್ಷಕ್ಕೆ ಅಶಿಸ್ತು ಮತ್ತು ಸದಸ್ಯರ ಜೊತೆ ಸಮನ್ವಯತೆ ಸಾಧಿಸದೇ ಅಧಿಕಾರಕ್ಕೆ ಜೋತು ಬಿದ್ದಿದ್ದರಿಂದ ನ್ಯಾಯಾಂಗದ ಮೂಲಕ ಅವಿಶ್ವಾಸ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆ, ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಸಲಾಗಿದ್ದು, ಭಾರತೀಪುರ ಲಕ್ಷ್ಮೀದೇವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.