ಬೆಂಗಳೂರು : ಸದ್ಯ ಗ್ರಾಮಾಂತರ ಎಸ್ಪಿಯಾಗಿರುವ ರವಿ ಚನ್ನಣ್ಣನವರ್‌ಗೆ ಕರ್ನಾಟಕದಾದ್ಯಂತ ಅಭಿಮಾನಿಗಳ ಬಳಗವೇ ಇದೆ. ಆದರೆ ಇದು ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಅವರಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಮಾಹಿತಿ ದೊರೆತಿದೆ.
ಬೆಂಗಳೂರು ಗ್ರಾಮಾಂತರ ಎಸ್ಪಿಯಾಗುವ ಮೊದಲು ರವಿ ಚನ್ನಣ್ಣನವರ್ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದರು. ಈ ವೇಳೆ ಸರ್ಕಾರಿ ನಂಬರ್ 9480801701 ನೀಡಲಾಗಿತ್ತು. ಅಧಿಕಾರ ಬದಲಾವಣೆಯಾದಾಗ ಸರ್ಕಾರ ನೀಡಿದ ನಂಬರ್ ಆ ಸ್ಥಾನಕ್ಕೆ ಬರುವ ಅಧಿಕಾರಿಗಳಿಗೆ ನೀಡುವುದು ವಾಡಿಕೆ. 15/03/2018 ರಿಂದ 18/06/2019ರ ವರೆಗೆ ಚನ್ನಣ್ಣನವರ್ ಡಿಸಿಪಿ ಆಗಿದ್ದರು. ನಂತರ 2019 ರಲ್ಲಿ ವರ್ಗಾವಣೆಯಾಗಿದ್ದು, ಆ ಜಾಗಕ್ಕೆ ರಮೇಶ್ ಬಾನೋತ್ ಅವರನ್ನು ನೇಮಕ ಮಾಡಲಾಗಿತ್ತು.
ಆದರೆ ಚಾರ್ಜ್ ಪಡೆದುಕೊಂಡ ದಿನದಿಂದ ಬಾನೋತ್ ನಂಬರ್ (9480801701)ಗೆ ದಿನಕ್ಕೆ 500 ರಿಂದ 600 ಕರೆಗಳು ಬರುತ್ತವಂತೆ. ಮಧ್ಯರಾತ್ರಿ, ನಸುಕಿನ ಜಾವ ಪೋನ್ ಕಾಲ್ ಮಾಡ್ತಿದ್ದಾರೆ. ರವಿ ಡಿ ಚನ್ನಣ್ಣನವರ್ ಅಭಿಮಾನಿ ಎಂದು ಫೋನ್ ಮಾಡಿ ತಲೆ ತಿಂತಿದ್ದಾರೆ. ಇದರಿಂದ ಬೇಸತ್ತು ಹೋದ ಡಿಸಿಪಿ ಬಾನೋತ್ ಕಮಿಷನರ್ಗೆ ಅಂತಿಮವಾಗಿ ಹೊಸ ನಂಬರ್‌ಗೆ ಮನವಿ ಮಾಡಿ ವಾರದ ಹಿಂದೆ ಹೊಸ ನಂಬರ್ ಪಡೆದಿದ್ದಾರೆ.