ಆನೇಕಲ್ : ಗುರುವಾರ ಮುಸ್ಲಿಂ ಸಮುದಾಯದ ಷಬ್-ಇ-ಬರಾತ್ ಆಚರಣೆ ಸಾಮೂಹಿಕವಾಗಿಯಲ್ಲದೇ ಮನೆಗಳಲ್ಲಿಯೇ ಆಚರಿಸುವ ಮೂಲಕ ಕೊರೊನಾ ಭೀತಿ ಹೋಗಲಾಡಿಸಬೇಕೆಂದು ಜಿಗಣಿ ವೃತ್ತ ನಿರೀಕ್ಷಕ ಕೆ ವಿಶ್ವನಾಥ್ ಕರೆ ನೀಡಿದ್ದಾರೆ. ಜಿಗಣಿ ಪೊಲೀಸ್ ಠಾಣೆ ಆವರಣದಲ್ಲಿ ನಡೆಸಲಾದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಮುಕ್ತ ಜಿಗಣಿ ಕಾಣುವ ಹಂಬಲವಿದ್ದರೆ ಕೂಡಲೇ ಮನೆಗಳಲ್ಲಿಯೇ ಇದ್ದು ಸಹಕರಿಸಿ ಎಂದು ಕೋರಿದರು.
ಸಭೆಯಲ್ಲಿದ್ದ ಎಲ್ಲಾ ಧರ್ಮದ ಮುಖಂಡರೂ ಇದಕ್ಕೆ ಸಮ್ಮತಿಸಿದರು. ಸಾಮೂಹಿಕವಾಗಿ ಗುಂಪು ಸೇರದೇ ತಮ್ಮ ಆಚರಣೆಗಳನ್ನು ಸಾಮಾಜಿಕ ಅಂತರ ಕಾಪಾಡುವ ಮುಖಾಂತರ ಇನ್ನೊಬ್ಬರ ಆರೋಗ್ಯವನ್ನೂ ಕಾಪಾಡುವ ಹೊಣೆ ಹೊರುವುದಾಗಿ ಭರವಸೆ ನೀಡಿದರು. ಆನೇಕಲ್ ತಾಲೂಕಿನ ಸುತ್ತಲೂ ತಬ್ಲಿಘಿಯಿಂದ ಬಂದಿರುವ ವ್ಯಕ್ತಿಗಳ ಬಗ್ಗೆ ಶಂಕೆಯಿದೆ. ಅಂತಹವರನ್ನು ಕಂಡರೆ ನೇರವಾಗಿ ಪೊಲೀಸರನ್ನ ಸಂಪರ್ಕಿಸಿ ಹಾಗೂ ಅಂತವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು.

ಶಂಕಿತರನ್ನು ವೈದ್ಯಕೀಯ ತಪಾಸಣೆಗಷ್ಟೇ ಒಳಪಡಿಸಿ, ಪಾಸಿಟಿವ್ ಎನಿಸಿದರೆ ಚಿಕಿತ್ಸೆ ಮೂಲಕ ಗುಣಪಡಿಸಲಾಗುವುದು. ಈ ಕುರಿತು ಅನುಮಾನ ಬೇಡ ಎಂದು ಕೋರಿದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಮತ್ತು ಮಾಹಿತಿಗಳೆಲ್ಲವೂ ನಿಜವೆಂದು ನಂಬಿ ಭೀತಿಗೊಳಗಾಗಬೇಡಿ. ಆತಂಕ ಸೃಷ್ಟಿಯಾದ್ರೆ ನಮ್ಮನ್ನು ಸಂಪರ್ಕಿಸಿ ಎಂದು ಮನವಿ ಮಾಡಿದರು.
ನೆರೆಹೊರೆಯಲ್ಲಿ ಹೊಟ್ಟೆಗಿಲ್ಲದ ಕಡುಬಡವರಿದ್ದರೆ ವಿಷಯ ತಿಳಿಸಿ, ಅವರನ್ನೂ ಕಾಪಾಡುವ ಹೊಣೆ ನಮ್ಮೆಲ್ಲರದ್ದಾಗಿದೆ. ಇಂತಹ ಕೆಲಸಕ್ಕೆ ನಾಗರಿಕರು ಕೈಜೋಡಿಸಿ ಎಂದು ಮನವಿ ಮಾಡಿದರು.