ಆನೇಕಲ್: ತಾಲೂಕಿನ ವಣಕನಹಳ್ಳಿ ಗ್ರಾಮಪಂಚಾಯತ್ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ 6ನೇ ರಾಷ್ಟ್ರೀಯ ಸೇವಾ ಯೋಜನೆಗೆ, ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ನೈಜಸ್ಥಿತಿಯ ವ್ಯವಸ್ಥೆಯೇ ವಿಭಿನ್ನವಾಗಿದ್ದು, ಅಲ್ಲಿ ವಿವಿಧ ಸಮುದಾಯಗಳು ಒಂದೆಡೆ ನೆಲೆಸಿ ತಮ್ಮ ತಮ್ಮ ಆಚರಣೆಗಳನ್ನು ಗೌರವಿಸುತ್ತಾ ಭಾತೃತ್ವದೊಂದಿಗೆ ಒಗ್ಗೂಡಿ ಬದುಕು ಕಟ್ಟಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಬದುಕು ನಗರ ಜೀವನಕ್ಕೆ ಮಾದರಿಯಾಗಿ ಕಾಣಿಸುತ್ತಿದೆ. ಓರ್ವ ರೈತ ತನ್ನ ಬದುಕಿನ ಜೊತೆಗೆ ಇರುವ ಕೃಷಿ ಚಟುವಟಿಕೆಗಳ ಆಗುಹೋಗುಗಳ ಕುರಿತು ಕಾಲಕಾಲಕ್ಕೆ ಮಳೆ-ಬೆಳೆ ಹವಾಮಾನ ಏರಿಳಿತ ಕುರಿತಂತೆ ಹೆಚ್ಚಿನ ಜ್ಞಾನ ಪಡೆದಿರುತ್ತಾನೆ ಎಂದರು.
ಶಿಕ್ಷಣ ಹೊಂದಿದವನೆಂದರೆ ಅಕ್ಷರ ಕಲಿತವನಲ್ಲ ಎಂಬುದನ್ನು ಬದಲಾಯಿಸಬೇಕಿದೆ. ರಾಷ್ಟ್ರೀಯ ಸೇವಾ ಯೋಜನೆ ಹಳ್ಳಿ ಸೊಗಡಿನ ಜೀವನ ಕ್ರಮದಲ್ಲಿ ಹೊಂದಿಕೊಳ್ಳುವ ತನ್ಮಯತೆ ವಿದ್ಯಾರ್ಥಿಗಳಲ್ಲಿ ಮೂಡಿ ಬರಲಿ ಎಂದು ಪ್ರಾಂಶುಪಾಲರು ಹಾರೈಸಿದರು.