ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ರೈತನ ಹೊಲದಲ್ಲಿನ ಮರಳನ್ನು ಅಕ್ರಮವಾಗಿ ಟ್ರ್ಯಾಕ್ಟರ್ ಮೂಲಕ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆಯಲು ಹೋದಾಗ ರೈತನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಪರಾರಿಯಾಗಿರುವ ಘಟನೆ ಹಳೇಕೋಟೆ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ರೈತ ನಾಗಹನುಮಯ್ಯ ಅವರ ಬಲಗಾಲಿನ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದು ಗಂಭೀರ ಗಾಯವಾಗಿದೆ, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಮಧ್ಯಾಹ್ನ 4 ಗಂಟೆ ತಮ್ಮ ಹೊಲದಲ್ಲಿ ಮರಳು ತೆಗೆಯುತ್ತಿರುವ ಮಾಹಿತಿ ನಾಗಹನುಮಯ್ಯ ಅವರಿಗೆ ತಿಳಿದಿದೆ. ಹೊಲದ ಬಳಿ ಹೋದಾಗ ನಾರಾಯಣ ನಾಯ್ಕ್ ಎಂಬ ವ್ಯಕ್ತಿ ಟ್ರ್ಯಾಕ್ಟರ್ನಲ್ಲಿ ಮರಳು ಸಾಗಿಸುತ್ತಿದ್ದುದು ಕಂಡುಬಂದಿದೆ.
ಕೂಡಲೇ ನಾಗಹನುಮಯ್ಯ ಟ್ರ್ಯಾಕ್ಟರ್ ತಡೆದು ಮರಳನ್ನು ಅಲ್ಲಿಯೇ ಸುರಿಯುವಂತೆ ಹೇಳಿದ್ದಾರೆ. ನಾಗಹನುಮಯ್ಯನ ಮಾತಿಗೆ ಬಗ್ಗದ ನಾರಾಯಣ್ ನಾಯ್ಕ್ ಟ್ರ್ಯಾಕ್ಟರ್ ಹತ್ತಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆತನ ಮಾತಿಗೆ ಹೆದರದ ನಾಗಹನುಮಯ್ಯ ಟ್ರ್ಯಾಕ್ಟರ್ಗೆ ಅಡ್ಡವಾಗಿ ನಿಂತಿದ್ದಾರೆ. ಕೋಪಗೊಂಡ ಚಾಲಕ ನಾರಾಯಣ್ ನಾಯ್ಕ್ ರೈತನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಮರಳು ತೆಗೆದುಕೊಂಡು ಹೋಗಿದ್ದಾನೆ.
ನಾಗಹನುಮಯ್ಯನ ಬಲಗಾಲಿನ ಮೂಳೆ ಮುರಿದು ಗಂಭೀರವಾಗಿ ಗಾಯವಾಗಿದ್ದು, ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯ ಶವಾಗಾರದಲ್ಲಿ ಮಹಿಳೆಯರ ಶವದ ನಗ್ನ ಫೋಟೊ ತೆಗೆದು ವಿಕೃತಿ: ಆರೋಪಿ ಬಂಧನ