ಹೊಸಕೋಟೆ: ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅನರ್ಹಗೊಂಡಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಬಿಜೆಪಿಯ ಯುವ ಮುಖಂಡ ಶರತ್ ಬಚ್ಚೇಗೌಡ ಅವರು ಶಾಕ್ ನೀಡಿದ್ದಾರೆ.
ಮುಂಬರುವ ಹೊಸಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ನಿರೀಕ್ಷೆ ಇರಿಸಿಕೊಂಡಿದ್ದ ನಾಗರಾಜ್ ಅವರ ಆಸೆಯನ್ನು ಹುಸಿಗೊಳಿಸುವಂತಹ ಹೇಳಿಕೆಯನ್ನು ಶರತ್ ಬಚ್ಚೇಗೌಡ ನೀಡಿದ್ದು, ಉಪಚುನಾವಣೆಯಲ್ಲಿ ನಾನೇ ಬಿಜೆಪಿ ಅಭ್ಯರ್ಥಿ ಎನ್ನುವ ಮೂಲಕ ಟಿಕೆಟ್ ಆಕಾಂಕ್ಷೆಯನ್ನು ಹೊರಹಾಕಿದ್ದಾರೆ.
ಹೊಸಕೋಟೆಯ ಬೈಲನರಸಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಹೀಗಾಗಿ, ಪಕ್ಷ ನಮ್ಮನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ. ಮುಂದಿನ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗುವ ವಿಶ್ವಾಸವಿದೆ ಎಂದರು.
ಎಂಟಿಬಿ ನಾಗರಾಜ್ ಅವರ ಬಿಜೆಪಿ ಸೇರ್ಪಡೆ ಮತ್ತು ಕಾಂಗ್ರೆಸ್ ಸಂಪರ್ಕದ ಬಗ್ಗೆ ಪ್ರತಿಕ್ರಿಯಿಸಿದ ಶರತ್, ಕಳೆದ ಎರಡು ವಾರಗಳಿಂದ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ನನ್ನನ್ನು ಯಾವುದೇ ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಊಹಾಪೋಹಕ್ಕೆ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ. ನಮ್ಮ ಪಕ್ಷಕ್ಕೆ ಬೇರೆಯವರು ಯಾರು ಸೇರಿಲ್ಲ. ಬೇರೆಯವರಿಗೆ ನಮ್ಮ ಪಕ್ಷ ಟಿಕೆಟ್ ನೀಡುತ್ತದೆ ಎಂಬುದು ದೂರದ ವಿಚಾರ. ಇಂದಿನ ರಾಜಕೀಯ ಬೆಳವಣಿಗೆ ನಾಳೆಗೆ ಇರುವುದಿಲ್ಲ ಎಂದರು.