ನೆಲಮಂಗಲ: ಮನೆ ಖಾಲಿ ಮಾಡುವಂತೆ ಲಾಂಗು ಮಚ್ಚುಗಳಿಂದ ಬೆದರಿಸಿದ್ದಲ್ಲದೇ ಜೆಸಿಬಿ ಮೂಲಕ ಮನೆ ಮತ್ತು ಪಕ್ಕದಲ್ಲಿದ್ದ ದೇಗುಲವನ್ನು ಕೆಡವಿರುವ ಘಟನೆ ನೆಲಮಂಗಲದ ಚಿಕ್ಕಮಾರನಹಳ್ಳಿಯಲ್ಲಿ ನಡೆದಿದೆ. ಸುಮಾರು 25ಕ್ಕೂ ಹೆಚ್ಚು ಜನರು ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಈ ವೇಳೆ ಜೆಸಿಬಿಗಳ ಮೇಲೆ ಕಲ್ಲು ತೂರಿದ ಗ್ರಾಮಸ್ಥರು, 8 ಜನರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಎಸ್.ಲಕ್ಷ್ಮೀನಾರಾಯಣ ಮತ್ತು ಕುಟುಂಬ ಬಹಳ ಹಿಂದಿನಿಂದಲೂ ನೆಲಮಂಗಲದ ಚಿಕ್ಕಮಾರನಹಳ್ಳಿ ಗ್ರಾಮದ 10 ಗುಂಟೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರು. 2018ರಲ್ಲಿ ಗ್ರಾಮದ ನಿವಾಸಿ ಹಾಗೂ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್.ಮೂರ್ತಿ ಎಂಬುವವರಿಗೆ 19 ಲಕ್ಷಕ್ಕೆ ಈ ಜಮೀನನ್ನು ವ್ಯಾಪಾರ ಮಾಡಿ 50 ಸಾವಿರ ಹಣ ಮುಂಗಡ ಹಣ ಪಡೆದಿದ್ದರು. ಆದ್ರೆ ಬಳಿಕ ಮೂರ್ತಿ ಅವರು ಬಾಕಿ ಹಣ ನೀಡಿರಲಿಲ್ಲವಂತೆ. ಬಾಕಿ ಹಣ ಕೇಳಲು ಹೋದ್ರೆ ಧಮ್ಕಿ ಹಾಕುತ್ತಿದ್ದರು ಎಂದು ಲಕ್ಷ್ಮೀ ನಾರಾಯಣ ಕುಟುಂಬ ಆರೋಪಿಸಿದೆ.
ಇನ್ನೂ ಹಲವು ಬಾರಿ ಜಮೀನು ವ್ಯಾಪಾರ ಮಾಡಿದ ಹಣಕ್ಕಾಗಿ ಎನ್.ಮೂರ್ತಿ ಮನೆ ಬಳಿಗೆ ಹೋದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟೆ ಅಲ್ಲದೆ ಈ ಹಿಂದೆ ಲಕ್ಷ್ಮಿನಾರಾಯಣನ ಮೇಲೆ ಒಂದು ಸುಳ್ಳು ದೂರು ನೀಡಿದ್ದರಂತೆ. ಅನಕ್ಷರಸ್ಥರಾದ ಇವರು ಅಸಲಿಗೆ 4 ಗುಂಟೆ ಜಮೀನನ್ನು 19 ಲಕ್ಷಕ್ಕೆ ಮಾರಾಟ ಮಾಡಿದ್ರಂತೆ. ಆದರೆ ಒಪ್ಪಂದದಲ್ಲಿ 10 ಗುಂಟೆ ಜಮೀನು ಖರೀದಿಸಿದ್ದಾಗಿ ನಮೂದಿಸಲಾಗಿತ್ತಂತೆ. ಅಲ್ಲದೇ ಅನಕ್ಷರಸ್ಥರು ಅನ್ನೋದನ್ನೆ ಬಂಡವಾಳ ಮಾಡ್ಕೊಂಡ ಎನ್. ಮೂರ್ತಿ ಜಮೀನು ನೋಂದಣಿ ವೇಳೆ ಒಪ್ಪಂದ ಮಾಡಿಕೊಳ್ಳೋದಾಗಿ ಕರೆಸಿ ಜಾಗದ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈಗ ಏಕಾಏಕಿ ಮಧ್ಯರಾತ್ರಿ ಆಗಮಿಸಿ ಮನೆಯನ್ನು ಧ್ವಂಸಗೊಳಿಸಿ ಬೀದಿ ಪಾಲು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಟುಂಬ ಬೀದಿ ಪಾಲು : ರಾತ್ರಿ ಮನೆ ಬಾಗಿಲು ಬಡಿದು, ಇಬ್ಬರಿಗೆ ಅಪಘಾತವಾಗಿದೆ ನೀರು ಕೊಡಿ ಎಂದು ಕೇಳಿದ್ದು, ನೀರು ತರಲು ಒಳಗೆ ಹೋಗ್ತಿದ್ದಂತೆ ಮಗುವಿನ ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು ಬೆದರಿಕೆ ಹಾಕಿದ್ದಾರೆ. ಬಳಿಕ ಮನೆಯಿಂದ ಹೊರಹಾಕಿ ಎರಡು ಜೆಸಿಬಿಗಳಿಂದ ಮನೆ ಸೇರಿದಂತೆ ಪಕ್ಕದಲ್ಲಿದ್ದ ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ, ಗ್ರಾಮಸ್ಥರು ಜೆಸಿಬಿಯನ್ನು ಅಡ್ಡಗಟ್ಟಿ, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣ ಸಂಬಂಧ ಆಟೋ ರಿಕ್ಷಾ, ಎರಡು ಜೆಸಿಬಿ, ಮಾರಕಾಸ್ತ್ರಗಳು ಸೇರಿದಂತೆ 8 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ದಲಿತರ ಮೇಲೆ ದೌರ್ಜನ್ಯ ಆರೋಪ: ಪಿಎಸ್ಐ ವಿರುದ್ಧ ಕೈ ನಾಯಕರ ಪ್ರತಿಭಟನೆ